’ಬನ್ನಿ ಕವಿಗಳೇ, ಬಹಳ ದಿನಗಳ ಮೇಲೆ ಊರಿಗೆ ಬಂದಿದ್ದೀರಿ. ಚೆನ್ನಾಗಿದ್ದೀರಿ ತಾನೇ? ಯಾರೋ ಮಾತನಾಡಿದಂತಾಗಿ ಹಿಂತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಸುತ್ತಾ ಕಣ್ಣಾಯಿಸಿದೆ ಉಹೂಂ ಯಾರೂ ಇಲ್ಲ..!
’ಅಲ್ಲಿ ಇಲ್ಲಿ ಯಾಕೆ ನೋಡುವಿರಿ ಕವಿಗಳೇ, ನಾನು ಅರಳಿಮರ ಮಾತನಾಡುತ್ತಿರುವೆ. ಎಷ್ಟೋ ವರ್ಷಗಳಿಂದ ಎತ್ತರಕ್ಕೆ ಬೆಳೆದು ನಿಂತಿರುವೆ. ಇನ್ನೂ ಬಿದ್ದಿಲ್ಲ. ಯಾರೋ ಮಹನೀಯರು ನನ್ನ ಸುತ್ತಲೂ ಕಟ್ಟೆ ಕಟ್ಟಿದ್ದಾರೆ. ಬನ್ನಿ ಇಲ್ಲಿ ಕುಳಿತು ವಿಶ್ರಮಿಸಿ. ಕೊಂಚ ನಿಮ್ಮೊಂದಿಗೆ ಮಾತನಾಡುವ ಬಯಕೆ ಇದೆ.
’ಆಯ್ತು ಅರಳಿಮರವೇ ಕುಳಿತುಕೊಂಡೆ. ಹೇಳಿ ನಿಮಗೀಗ ವಯಸ್ಸು ಎಂತಾ?
’ನನಗೆ ತಿಳಿಯದು ಮಾರೆಯರೇ. ಯಾರಿಗಾದರೂ ತಿಳಿದಿದ್ದರೇ ತಿಳಿದು ನನಗೂ ತಿಳಿಸಿ. ಈಗ ನಿಮ್ಮ ಕಥೆ ಹೇಳಿ. ಈಗಲೂ ಕಥೆ ಕವನ ಬರೆಯುತ್ತಿದ್ದೀರಾ. ಎಷ್ಟು ಪುಸ್ತಕ ಬರೆದಿರುವಿರಿ. ನಮ್ಮೂರು ಹಿಂತಿರುಗಿ ನೋಡಿದಾಗ ಎಂಬ ನಿಮ್ಮ ಪುಸ್ತಕದಲ್ಲೂ ನನ್ನ ಪ್ರಸ್ತಾಪವಿಲ್ಲ. ನನ್ನನ್ನು ನೀವು ಏಕೆ ಮರೆತಿರಿ..?
’ಇಲ್ಲ ಅರಳಿಮರವೇ, ನಾನು ಅರಳಿಕಟ್ಟೆ ಎಂಬ ನಾಟಕ ಬರೆದಿದ್ದು ನಿನ್ನ ನೆನಪಿನಲ್ಲೇ.
’ಹೌದೇ, ತುಂಬಾ ಸಂತೋಷ. ಆ ನಾಟಕ ಇಲ್ಲಿ ಪ್ರದರ್ಶಿಸಬಹುದಿತ್ತಲ್ಲ..
’ನಾನು ನಾಟಕ ಬರೆಯಬಹುದು ಅಷ್ಟೇ. ಅದನ್ನು ಕಲಿತು ಪ್ರದರ್ಶಿಸುವರು ಸಿಗಬೇಕಷ್ಟೇ.
’ನಿಂತುಹೋದ ಕನ್ನಡ ರಂಗವೈಭವ ಎಂಬ ನಾಟಕ ಪುಸ್ತಕದ ಮುಖಪುಟದಲ್ಲಿ ಚಿತ್ರನಟ ನರಸಿಂಹರಾಜು ಪೋಟೋ ಹಾಕಿದ್ದೀರಿ. ಅವರು ಇಲ್ಲಿ ಬಂದು ನಾಟಕ ನಟಿಸಿದ್ದರು..
’ನರಸಿಂಹರಾಜು ಕುರಿತಾಗಿಯೇ ಪುಸ್ತಕದಲ್ಲಿ ಬರೆದಿದ್ದೇನೆ. ಅವರು ಇಲ್ಲಿ ಬಂದಾಗ್ಗೆ ನಾನು ಹೈಸ್ಕೂಲು ವಿದ್ಯಾರ್ಥಿ. ಅಗ ಊರಿನ ರಥೋತ್ಸವ ಜಾತ್ರೆಗೆ ಅಪಾರ ರಾಸುಗಳು ಕಟ್ಟುತ್ತಿದ್ದವು. ಅಂದು ನಾಟಕ ಕಂಪನಿಯೊಂದು ಇಲ್ಲಿ ಮೊಕ್ಕಾಂ ಮಾಡಿ ನರಸಿಂಹರಾಜು, ಸುದರ್ಶನ್, ಶಕ್ತಿಪ್ರಸಾದ್ ನಾಟಕದಲ್ಲಿ ನಟಿಸಲು ಬಂದಿದ್ದರು.
’ಅಲ್ಲಿ ಒಂದು ಟೆಂಟ್ ಸಿನಿಮಾ ಇತ್ತು..
’ಹೌದು. ಆಗ ವಾರಕ್ಕೆರಡು ಸಿನಿಮಾ ತೋರಿಸುತ್ತಿದ್ದರು. ಭಾನುವಾರದಿಂದ ಮೂರು ದಿನ ತಮಿಳು, ನಾಲ್ಕು ದಿನ ಕನ್ನಡ ಸಿನಿಮಾ. ಆ ಸಿನಿಮಾ ಪೋಸ್ಟರ್ ನೋಡೇ ಆನಂದಿಸುತ್ತಿದ್ದವು. ಕದ್ದು ಸಿನಿಮಾ ನೋಡಿ ಅಪ್ಪನಿಂದ ಹೊಡೆಸಿಕೊಂಡ ಮಂಡಿಚಿಪ್ಪಿನ ಗಾಯದ ಗುರುತು ಇನ್ನು ಇದೆ.
’ ಆ ಟೆಂಟ್ ಸಿನಿಮಾ ಜಾಗದಲ್ಲೇ ಗ್ರಾಮ ಪಂಚಾಯ್ತಿ ಕಛೇರಿ ಕಟ್ಟಡ ಇತ್ತಲ್ಲ.. ಅಲ್ಲಿ ಗಣೇಶೋತ್ಸವಕ್ಕೆ ಹರಿಕಥೆ, ಚೌಡಿಕೆ ಕಥೆ, ನಾಟಕ, ಆರ್ಕೆಸ್ಟ್ರಾ..
’ನಿಜ, ನಮಗೆ ಟೆಂಟ್ ಸಿನಿಮಾ ಹೋದಮೇಲೆ ನಮಗೆ ಹತ್ತು ದಿನ ಇದೇ ಮನರಂಜನೆ. ಭಾನುವಾರ ಗಣೇಶನ ವಿಸರ್ಜನೆ. ಹಾಸನ ಬಂಗಾರಿ ತಂಡದ ಕೀಲುಕುದುರೆ ಮನರಂಜನೆ..
’ಇಲ್ಲೇ, ನೀವು ಜಿ.ಎಸ್.ಪ್ರಕಾಶ್ ಬರೆದ ಸರಿದ ತೆರೆ ನಾಟಕದಲ್ಲಿ ಮಾತು ಮರೆತು..
’ಅದೆಂತು ಮರೆಯಲಿ. ಮೊದಲ ರಂಗ ಪ್ರವೇಶ ಗಾಬರಿ..
’ಮತ್ತೇ ಅಲ್ಲಿ ನೀವು ಜಿಲ್ಲಾ ನಾಟಕೋತ್ಸವ..
’ಹೌದು, ಬೇಲೂರು ಸಿ.ಎಸ್.ಆಚಾರ್ ಅವರ ಹೆಣದ ನಾಟಕ ನೋಡಿ ಮೊದಲ ಬಾರಿ ವಿಮರ್ಶೆ ಬರೆದಿದ್ದೇ.
’ನೀವು ವೀರಪ್ಪನ್ ಭೂತ ನಾಟಕ ಬರೆದಾಡಿಸಿದ್ದು..!
’ಹೌದು ೧೯೯೧ರಲ್ಲಿ. ಹೇಮಾವತಿ ತೀರಿದ ಗಾಂಧಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಿಧನರಾದ ಆ ವರ್ಷ ನಾವು ಹುಡುಗರು ಡಾ. ಗೊರೂರು ಸ್ಮರಣ ಸಮಿತಿ ರಚಿಸಿಕೊಂಡು, ನಾನು ಡಾ.ಗೊರೂರು ಬದುಕು ಬರಹ ಪ್ರಬಂಧ ಮಂಡಿಸಿ ಅವರು ಹುಟ್ಟಿದ ಮನೆ ಸ್ಮಾರಕವಾಗಬೇಕೆಂದು ಪ್ರಯತ್ನ ನಡೆಸಿದೆವು.
’ಅವರ ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿರುವೆಯಾ.?
’ನೋಡಿದ್ದೇನೆ. ಅದು ಬಿಡುಗಡೆ ಆಗಿ ೫೦ ವರ್ಷ ಕಳೆದಿದೆ.
’ಅದರಲ್ಲಿ ತೋರಿಸಿದ್ದಾರಲ್ಲಾ ಮಾರಿ ಹಬ್ಬ. ಅದು ಹಿಂದೆ ಇಲ್ಲೇ ನಡೆಯುತ್ತಿತ್ತು ಗೊತ್ತೇ.?
’ ಗೊತ್ತಿಲ್ಲ. ಆದರೆ ಆ ಸಿನಿಮಾದಲ್ಲಿ ಊರಿಗೆ ಪ್ರವಾಹ ಬಂದ ಸೀನ್ ಇದೆಯೆಲ್ಲಾ. ಅಂತಹ ಸೀನ್ ೧೯೯೧ರಲ್ಲಿ ನೋಡಿದ್ದೆ.
’ ಇರಲಿ ಈಗ ಊರಿನ ಶ್ರೀ ಯೋಗನರಸಿಂಹಸ್ವಾಮಿ ತೇರು ಜಾತ್ರೆ ನೋಡಲು ಬಂದಿರುವೆ. ಊರಿನ ಕಲಾವಿದರು ಪೌರಾಣಿಕ ನಾಟಕೋತ್ಸವ ಏರ್ಪಡಿಸಿದ್ದಾರೆ. ನೋಡಿ ಹೋಗು. ನಾನು ಇನ್ನು ಕೆಲವು ವರ್ಷ ಬದುಕಿರುವೆ. ಮತ್ತೇ ಎಂದಾದರೂ ಒಂದು ದಿನ ಬಾ..

–ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.


