ಶ್ರೀ ಕಾಗಿನೆಲೆ ಮಹಾಸಂಸ್ಥಾನ ಪೀಠದಿಂದ ಪ್ರತಿಭಾ ಪುರಸ್ಕಾರ – ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಪಿತೂರಿ – ಕುರುಬ ಸಮುದಾಯದ ಸ್ವಾಮೀಜಿಗಳ ಆಕ್ರೋ
ಬೆಂಗಳೂರು ಆ, 5; ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದಿಂದ ಪ್ರತಿಭಾವಂತ 850ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕಾಗಿನೆಲೆ ಮಹಾ ಸಂಸ್ಥಾನದ ನಿರಂಜನಾನಂದ ಪುರಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕನಕಧಾಮ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಭಕ್ತರು ನಮ್ಮ ಜೋಳಿಗೆ ತುಂಬಿಸಿದರೆ ಮಾತ್ರ ನಾವು ಬಡವರ ಕೈ ಹಿಡಿಯಲು ಸಾಧ್ಯ. ಒಂದು ಸಮಾಜದಲ್ಲಿ ಎಷ್ಟು ಜನ ಶಿಕ್ಷಣವಂತರು ಇದ್ದ ಎಂಬುದರ ಮೇಲೆ ಆ ಸಮಾಜ ಎಷ್ಟು ಬೆಳವಣಿಗೆ ಕಂಡಿದೆ ಎನ್ನಬಹುದು. ಜ್ಞಾನ ಒಂದು ಸಮುದಾಯದ ಸ್ವತ್ತಲ್ಲ. ಹಲವಾರು ಜನ ನಮ್ಮ ಬಳಿ ಬಂದಾಗ ಹಣ ಇಲ್ಲ ಎನ್ನಲು ದುಃಖವಾಗುತ್ತದೆ ಎಂದು ಗಧ್ಗದಿತರಾದರು. ಹತ್ತು ಕೋಟಿ ರೂಪಾಯಿ ಮೊತ್ತದ ನಿಶ್ಚಿತ ಠೇವಣಿ ಇಟ್ಟು ಬಡ ಮಕ್ಕಳಿಗೆ ಪ್ರೋತ್ಸಾಹ ನೀಡೋಣ ಎಂದರು.
ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ಆಗುತ್ತಿದೆ. ನಾವು ಆ ಚುಕ್ಕೆಯನ್ನು ಅವರಿಗೆ ದೃಷ್ಟಿಬೊಟ್ಟಾಗಿ ಬದಲಿಸುತ್ತೇವೆ. ಮುಡಾದವರು ಅವರ ಸೈಟ್ ಗಳನ್ನು ಬೇಕಾದರೆ ವಾಪಸ್ ಪಡೆಯಲಿ. ಯಾವ ಯಾವ ರಾಜಕಾರಣಿಗಳು ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸಿದ್ದರಾಮಯ್ಯ ವಿರುದ್ಧ ಪಿತೂರಿ ಸಲ್ಲದು ಎಂದು ಎಚ್ಚರಿಕೆ ನೀಡಿದರು.
ಕೆ.ಆರ್. ನಗರದ ಕನಕಗುರು ಪೀಠದ ರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಲಿಂಗಾಯತ ಸಮುದಾಯ ಕಳೆದ 300 ವರ್ಷಗಳಿಂದ ವಿದ್ಯಾದಾನ ಮಾಡುತ್ತಿದೆ. ಆದರೆ ನಾವು ಕಳೆದ 25-30 ವರ್ಷಗಳಿಂದ ಶಿಕ್ಷಣಕ್ಕೆ ನೆರವು ನೀಡುತ್ತಿದ್ದೇವೆ. ಈ ಮೊದಲೇ ಪ್ರೋತ್ಸಾಹ ನೀಡಿದ್ದರೆ ಸಮಾಜದಲ್ಲಿ ಶೈಕ್ಷಣಿಕ ಪ್ರಗತಿ ಹೆಚ್ಚಿರುತ್ತಿತ್ತು. ನಾವು ಉಳ್ಳವರಿಂದ ಬೇಡಿ ಕಾರ್ಯಕ್ರಮ ಮಾಡುವ ಪರಿಸ್ಥಿತಿ ಬಂದಿದೆ ಎಂದರು.
ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ. ಯಾವುದೇ ಸ್ಥಾನಮಾನ ಶಾಶ್ವತ ಅಲ್ಲ. ಅಧಿಕಾರ ಮತ್ತು ಹಣ ಬಂದಾಗ ನಮ್ಮವರನ್ನು ಮರೆಯಬಾರದು. ಸೌಂದರ್ಯ ಹಣ ಶಾಶ್ವತ ಅಲ್ಲ. ಜ್ಞಾನ ಮಾತ್ರ ಶಾಶ್ವತ. ಜ್ಞಾನ ಪಡೆಯಲು ಓದಬೇಕು. ವಿದ್ಯೆ ಗಳಿಸಿದವನಿಗೆ ಜಗತ್ತೇ ಆಸ್ತಿ. ಮುಖ್ಯಮಂತ್ರಿಗಳ ವಿರುದ್ದದ ಪಿತೂರಿಯನ್ನು ಸಮಾಜ ಸಹಿಸದು ಎಂದರು
ಮಾಜಿ ಸಚಿವ.ಎಚ್.ಎಂ.ರೇವಣ್ಣ ಮಾತನಾಡಿ, ಅಪರೂಪದ ರಾಜಕಾರಣಿ ಸಿದ್ದರಾಮಯ್ಯ. ದೇವರಾಜ ಅರಸು, ವೀರಪ್ಪ ಮೊಯಿಲಿ, ಬಂಗಾರಪ್ಪ ಅವರಿಗೆ ಕಷ್ಟ ಕೊಟ್ಟವರು ಯಾರು?. ಸಿದ್ದ ರಾಮಯ್ಯ 40 ವರ್ಷ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿರುವ ರಾಜಕಾರಣಿ. ಅತಿ ಹಿಂದುಳಿದ ವರ್ಗಗಳ ಜನತೆಗೆ ಮಂತ್ರಿ ಸ್ಥಾನ ನೀಡಿದವರು. ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಧ್ವನಿ ಸಿದ್ದರಾಮಯ್ಯ. ಅವರು ಯಾವುದೇ ಕಾರಣಕ್ಕೂ ತಮ್ಮ ನಿವೇಶನಗಳನ್ನು ವಾಪಸ್ ಕೊಡಬೇಕಾಗಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ಪತ್ನಿ ಆಗಿದ್ದರೂ ಅವರು ರಾಜಕೀಯ ನೋಡಿಲ್ಲ. ಅವರ ಶ್ರೀಮತಿಗೆ ಸಾಕಷ್ಟು ನೋವಾಗಿದೆ ಎಂದರು. ಜಿ.ಟಿ.ದೇವೇಗೌಡ ಬೇಡ ಎಂದರೂ ಕುಮಾರಸ್ವಾಮಿ ಅವರಿಗೆ ಮೇಲಿನ ಒತ್ತಡ ಬಂದಿದ್ದಕ್ಕೆ ಹೋರಾಟ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ರಾಜ್ಯಪಾಲರ ಹಕ್ಕು ಕರ್ತವ್ಯ ಏನು ಎಂಬುದನ್ನು ಸಂವಿಧಾನ ಹೇಳಿದೆ. ಗೌಡರ ಮನೆಯವರು 47 ನಿವೇಶನಗಳನ್ನು ಪಡೆದುಕೊಂಡಿದೆ, ಪ್ರೌಢಾವಸ್ಥೆಗೆ ಬಾರದವರ ಹೆಸರಲ್ಲಿಯೂ ನಿವೇಶನ ಖರೀದಿ ಮಾಡಿದ್ದಾರೆ. ಜನತೆಗೆ ಸರಿಯಾದ ರೀತಿಯಲ್ಲಿ ತಿಳಿವಳಿಕೆ ನೀಡಲು ಮುಂದಾಗಬೇಕು. ಪ್ರಕರಣದ ಬಗ್ಗೆ ನ್ಯಾಯಾಂಗ ನಿಖೆಗೆ ಆದೇಶ ಕೊಡಲಾಗಿದ್ದರೂ ಈಗ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಲ್ಬರ್ಗಾ ವಿಭಾಗದ ಪೀಠದ ರಮಾನಂದಪುರಿ ಸ್ವಾಮೀಜಿ, ಹೊಸದುರ್ಗ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.