ಕರ್ನಾಟಕದಾದ್ಯಂತ ಬಿಸಿಲು ಚಳಿಯ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಒಂದಷ್ಟು ಜಿಲ್ಲೆಗಳಲ್ಲಿ ಬಿಸಿಲು ಝಳ ಹೆಚ್ಚಾಗಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಇನ್ನೂ ಚಳಿ ಮುಮದುವರೆದಿದೆ. ಕಲಬುರಗಿಯಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಪ್ರಮಾಣದ ಚಳಿ ಮುಂದುವರೆದಿದೆ. ಬೆಳಗಿನ ಜಾವ ಚಳಿ ಇದ್ದರೂ ಬಿಸಿಲ ಝಳವೂ ತೀವ್ರವಾಗಿದೆ. ಮೈಸೂರು ಹಾಗೂ ಚಾಮರಾಜನಗರದಲ್ಲಿ 12.1 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಉಷ್ಣಾಂಶದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಎಷ್ಟು ಗರಿಷ್ಠ, ಕನಿಷ್ಠ ಉಷ್ಣಾಂಶವಿದೆ ಎಂಬುದನ್ನು ತಿಳಿಯೋಣ. ಕನಿಷ್ಠ ತಾಪಮಾನವು ಕರಾವಳಿಯಲ್ಲಿ 19-21 ಡಿಗ್ರಿ ಸೆಲ್ಸಿಯಸ್ನಷ್ಟಿದೆ. ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಧಾರವಾಡ, ಗದಗ, ಹಾವೇರಿಯಲ್ಲಿ 15-17 ಡಿಗ್ರಿ ಸೆಲ್ಸಿಯಸ್, ಬೀದರ್, ಕಲಬುರಗಿ, ಕೊಪ್ಪಳದಲ್ಲಿ 18-21 ಡಿಗ್ರಿ ಸೆಲ್ಸಿಯಸ್ ಇದೆ.
ದಕ್ಷಿಣ ಒಳನಾಡಿನ ಆಗುಂಬೆ, ಚಾಮರಾಜನಗರ, ಚಿಂತಾಮಣಿ, ಮಡಿಕೇರಿ ಮತ್ತು ಮೈಸೂರಿನಲ್ಲಿ 11-14 ಡಿಗ್ರಿ ಸೆಲ್ಸಿಯಸ್, ಬೆಂಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ 15-17 ಡಿಗ್ರಿ ಸೆಲ್ಸಿಯಸ್ ಇದೆ.