ನವದೆಹಲಿ: ಕೇಂದ್ರ ದೆಹಲಿಯ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಮಂಗಳವಾರ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಆದಾಯ ತೆರಿಗೆ ಕಚೇರಿಯ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಅವಘಡಕ್ಕೆ ಕಾರಣ ಏನೆಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಿಯಂತ್ರಿಸಲು 21 ಅಗ್ನಿಶಾಮಕ ಟೆಂಡರ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ಇಲಾಖೆ ತಿಳಿಸಿದೆ. ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ ನೌಕರರನ್ನು ತಕ್ಷಣವೇ ಸ್ಥಳಾಂತರಿಸಲಾಗುತ್ತಿದೆ. ಅಗ್ನಿಶಾಮಕ ಕಾರ್ಯಾಚರಣೆಯನ್ನು ಸುಲಭಗೊಳಿಸಲು ಕಟ್ಟಡದ ಸುತ್ತಲಿನ ಪ್ರದೇಶವನ್ನು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ ಎಂದು ಅಗ್ನಿಶಾಮಕ ದಳದವರು ತಿಳಿಸಿದ್ದಾರೆ. ಬೆಂಕಿ ಅನಾಹುತಕ್ಕೆ ನಿಜವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡಿರುವ ಕಟ್ಟಡವು ಹಳೆಯ ಪೊಲೀಸ್ ಹೆಡ್ಕ್ವಾರ್ಟರ್ಸ್ ಎದುರು ಇರುವ ಕಟ್ಟಡವಾಗಿದೆ.
“ಆದಾಯ ತೆರಿಗೆ ಸಿಆರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಧ್ಯಾಹ್ನ 3.07ಕ್ಕೆ ಫೋನ್ ಬಂದಿತ್ತು. ನಾವು ಒಟ್ಟು 21 ಅಗ್ನಿಶಾಮಕ ಟೆಂಡರ್‌ಗಳನ್ನು ಕಳುಹಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಾವು ಸ್ಥಳೀಯ ಪೊಲೀಸರಿಗೆ ವಿಷಯದ ಬಗ್ಗೆ ತಿಳಿಸಿದ್ದೇವೆ” ಎಂದು ಡಿಎಫ್‌ಎಸ್ ಅಧಿಕಾರಿಗಳು ತಿಳಿಸಿದ್ದಾರೆ.