ಮುದ್ದೇಬಿಹಾಳ: ಶಿಕ್ಷಕಿಯ ಬೈಗುಳ, ಹೊಡೆತಕ್ಕೆ ಬೇಸತ್ತು ೭ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ವಿತರಿಸುವ ಕಬ್ಬಿಣಾಂಶದ ೧೦ಕ್ಕೂ ಹೆಚ್ಚು ಮಾತ್ರೆಗಳನ್ನು ಶಾಲಾ ಅವಧಿಯಲ್ಲಿಯೇ ಏಕಕಾಲಕ್ಕೆ ಸೇವಿಸಿ ಅಸ್ವಸ್ಥಗೊಂಡ ಘಟನೆ ಸೋಮವಾರ ನಡೆದಿದ್ದು ಸಕಾಲಿಕ ಚಿಕಿತ್ಸೆಯಿಂದಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳಿಸಲು ಕ್ರಮ ಕೈಕೊಳ್ಳಲಾಗಿದೆ. ಪಟ್ಟಣದ ತಾಳಿಕೋಟೆ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೃಷ್ಣಾ ರಮೇಶ ದೊಡಮನಿ ಎಂಬಾತನೇ ದುಡುಕಿನ ನಿರ್ಧಾರ ಕೈಕೊಂಡ ವಿದ್ಯಾರ್ಥಿಯಾಗಿದ್ದಾನೆ. ಶಾಲೆಯಲ್ಲಿ ಟೇಬಲ್ ಮೇಲೆ ಇಡಲಾಗಿದ್ದ ಈ ಮಾತ್ರೆಗಳನ್ನು ಸೇವಿಸಿ ಕೂಡಲೇ ಅಸ್ವಸ್ಥಗೊಂಡ ಅವನನ್ನು ಸ್ಥಳೀಯ ಚಿಕ್ಕಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತು. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಮಾತ್ರೆಯ ಅಂಶಗಳನ್ನೆಲ್ಲ ವಾಂತಿ ಮಾಡಿಸುವ ಮೂಲಕ ಹೊಟ್ಟೆ ಸ್ವಚ್ಛಗೊಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಬಿಇಓ ಬಿ.ಎಸ್.ಸಾವಳಗಿ ಅವರು ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ಉತ್ತರಿಸಿದ ಬಾಲಕ ತನಗೆ ಶಿಕ್ಷಕಿ ರಾಜೇಶ್ವರಿ ಜಂಗೀನ ಎನ್ನುವವರು ಸುಮ್ಮನೆ ಬೈಯುವುದು, ಹೊಡೆಯುವುದು ಮಾಡುತ್ತಾರೆ. ಸಹಪಾಠಿಗಳು ಹೇಳಿದ ಮಾತನ್ನು ಕೇಳಿಕೊಂಡು ನನ್ನನ್ನೇ ದೂಷಿಸುತ್ತಾರೆ. ಸಹಪಾಠಿಗಳು ಕೂಡಾ ನನಗೆ ಬೈಯುತ್ತಾರೆ. ಇದರಿಂದ ಬೇಸತ್ತು ಶಾಲೆಯ ಟೇಬಲ್ ಮೇಲೆ ಇಟ್ಟಿದ್ದ ಮಾತ್ರೆಗಳನ್ನು ನುಂಗಿದೆ ಎಂದು ಹೇಳಿಕೆ ನೀಡಿದ್ದಾನೆ. ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಇಓ ಅವರು ಸಧ್ಯ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡುತ್ತಿದ್ದೇವೆ. ಘಟನೆ ಕುರಿತು ಡಿಡಿಪಿಐ ಅವರ ಗಮನಕ್ಕೆ ತಂದು, ವಿದ್ಯಾರ್ಥಿಯು ಶಿಕ್ಷಕಿಯ ಮೇಲೆ ಮಾಡಿದ ಆರೋಪದ ತನಿಖೆ ನಡೆಸಿ ಸತ್ಯಾಸತ್ಯತೆ ಪರಾಮರ್ಶಿಸಿದ ನಂತರ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ, ಜಿಲ್ಲಾ ದೌರ್ಜನ್ಯ ನಿವಾರಣಾ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಸಿದ್ದಾಪುರ ಅವರು ಮಕ್ಕಳ ಕೈಗೆ ಮಾತ್ರೆಗಳು ಸಿಗುವಂತೆ ಇರಿಸಿದ್ದು ಶಾಲೆಯ ಮುಖ್ಯಾಧ್ಯಾಪಕರ ಮತ್ತು ಶಿಕ್ಷಕರ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ. ಆರೋಗ್ಯ ಇಲಾಖೆಯಿಂದ ಪ್ರತಿ ಶಾಲೆಗೆ ಕಬ್ಬಿಣಾಂಶದ ಮಾತ್ರೆ ಕೊಡಲಾಗುತ್ತದೆ. ಘಟನೆ ನಡೆದ ಶಾಲೆಯಲ್ಲಿ ಕಳೆದ ವರ್ಷ ಈ ಮಾತ್ರೆಗಳನ್ನು ವಿತರಿಸಲಾಗಿತ್ತು. ಉಳಿದ ಮಾತ್ರೆಗಳನ್ನು ಹಾಗೇ ಇಡಲಾಗಿತ್ತು. ಕಳೆದ ವರ್ಷದ ಮಾತ್ರೆಗಳನ್ನು ಈ ವಿದ್ಯಾರ್ಥಿ ಸೇವಿಸಿದ್ದಾನೆ. ಈ ಘಟನೆ ಬಗ್ಗೆ ಡಿಡಿಪಿಐ, ಬಿಇಓ ಅವರು ಸಮಗ್ರ ತನಿಖೆ ನಡೆಸಿ ಬೇಜವಾಬ್ಧಾರಿತನ ತೋರಿದ ಮುಖ್ಯಾಧ್ಯಾಪಕ ಮತ್ತು ಶಿಕ್ಷಕರನ್ನು ಸೇವೆಯಿಂದ ಕೂಡಲೇ ಅಮಾನತ್ತುಗೊಳಿಸಬೇಕು. ವಿದ್ಯಾರ್ಥಿಗೆ ಏನಾದರೂ ಸಮಸ್ಯೆ ಆದಲ್ಲಿ ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.