ನವದೆಹಲಿ, ಜುಲೈ 25: ಬಿಹಾರದ ಮಾದರಿಯಲ್ಲಿ ಇಡೀ ದೇಶಾದ್ಯಂತ ಭಾರತೀಯ ಚುನಾವಣಾ ಆಯೋಗ(ECI)ವು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ನಡೆಸಲು ಮುಂದಾಗಿದೆ. ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತದಾರರ ಪಟ್ಟಿಯ ಸಮಗ್ರತೆಯನ್ನು ರಕ್ಷಿಸಲು ತನ್ನ ಸಾಂವಿಧಾನಿಕ ಆಶಯವನ್ನು ಪೂರೈಸಲು ಆಯೋಗವು ಈಗ ಇಡೀ ದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಿಹಾರದಲ್ಲಿ ಎಸ್‌ಐಆರ್ ಕುರಿತು ವಿರೋಧ ಪಕ್ಷಗಳ ಕೋಲಾಹಲದ ನಡುವೆಯೇ ಈ ಘೋಷಣೆ ಹೊರಬಿದ್ದಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹಲವಾರು ಸಂದರ್ಭಗಳಲ್ಲಿ ಈ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ ಮತ್ತು ರಾಜ್ಯದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಸುಳಿವು ನೀಡಿದ್ದಾರೆ.