ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಇ-ಸ್ವತ್ತು ಹಾಗೂ ಆಸ್ತಿ ತೆರಿಗೆ ಮೇಳ ಅಭಿಯಾನಕ್ಕೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಶುಕ್ರವಾರ ಚಾಲನೆ ನೀಡಿದರು.
ಇ-ಸ್ವತ್ತು ಸಮಸ್ಯೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕ್ರಮವಾಗಿ ‘ವಿಶೇಷ ಅಭಿಯಾನ ಆರಂಭಿಸಿರುವ ಪಾಲಿಕೆಯು, ಆಯಾ ವಲಯದಲ್ಲಿ ಪ್ರತಿ ಮೊದಲ ಹಾಗೂ ಮೂರನೇ ಶನಿವಾರ ವಿಶೇಷ ಕೌಂಟರ್ ಮೂಲಕ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸುವುದು ಮೇಳದ ಉದ್ದೇಶ.
ಮೇಳಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಸಂತೋಷ ಲಾಡ್, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೂಳಚೆ ಪ್ರದೇಶಗಳ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಕೆಲಸ ಆಗಲಿಲ್ಲ. ಕೇವಲ ಉದ್ಯಾನ, ಗಟಾರ, ರಸ್ತೆ ನಿರ್ಮಾಣವನ್ನೇ ಸ್ಮಾರ್ಟ್ ಎಂದು ಬಿಂಬಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಮುಂದಿನ 25 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ಭವಿಷ್ಯದ ನಗರ ಯೋಜನೆ ಜಾರಿಯಾಗಬೇಕು. ಬೆಳವಣಿಗೆಯಲ್ಲಿ ಅಧಿಕಾರಿಗಳ ಪಾತ್ರ ಬಹಳ ದೊಡ್ಡದು.
ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಾಗಿ ಇರುವುದಿಲ್ಲ.ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರ ಯೋಜನೆಗೆ ಸಂಬಂಧಿಸಿದಂತೆ ಪರಿಣಿತರು ಇರುವುದಿಲ್ಲ. ಆದರೆ,
ಅಂತಾರಾಷ್ಟ್ರೀಯ ಸಂಸ್ಥೆಯ ನೆರವಿನೊಂದಿಗೆ ಭವಿಷ್ಯದ ನಗರ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಇ-ಸ್ವತ್ತು ಹಾಗೂ ಆಸ್ತಿ ತೆರಿಗೆ ಮೇಳ ಒಂದು ಉತ್ತಮ ಕ್ರಮವಾಗಿದೆ. ಇ-ಸ್ವತ್ತು ಸೃಜಿಸುವಲ್ಲಿ ಪಾಲಿಕೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಿಬೇರೆಯದಕ್ಕೆದಾರಿಮಾಡಿಕೊಂಡಿದ್ದಾರೆ ಎಂಬ ವ್ಯಾಪಕ ದೂರುಗಳು ಬರುತ್ತಿದ್ದವು. ಇನ್ನು ಮುಂದೆ ಇಂಥ ದೂರು ಬರದಂತೆ ನೋಡಿಕೊಳ್ಳಬೇಕು. ಮುಂದೆಯಾದರೂ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿ. ಆಸ್ತಿ ಮಾಲೀಕರಿಗೆ ತ್ವರಿತವಾಗಿ ಇ-ಸ್ವತ್ತು ಸಿಗುವಂತಾಗಲಿ ಎಂದು ಸಲಹೆ ನೀಡಿದರು.
ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯ ಬಳಿ 100 ಎಕರೆ ಜಾಗವಿದ್ದು ಅಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಉದ್ಯಾನ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಫೆಬ್ರವರಿ ತಿಂಗಳಿಂದ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲಿ ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಇ-ಆಸ್ತಿ ಹಾಗೂ ಆಸ್ತಿ ತೆರಿಗೆ ಮೇಳ ನಡೆಸಲಾಗುವುದು. ಸಾರ್ವಜನಿಕರಿಂದ ಆನ್‌ಲೈನ್‌ನಲ್ಲಿ ಇ-ಆಸ್ತಿ ಅರ್ಜಿ ದಾಖಲಿಸಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಮೆಸೆಜ್ ರವಾನೆಯಾಗಲಿದೆ. ಇಲ್ಲಿಯವರೆಗೆ 1,06,055 ಆಸ್ತಿಗಳ ಇ-ಆಸ್ತಿ ಸೃಜಿಸಲಾಗಿದೆ ಎಂದರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚಂದ್ರಶೇಖರ ಮನಗುಂಡಿ, ಶಿವು ಮೆಣಸಿನಕಾಯಿ, ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ, ಪ್ರಭಾರ ಅಭಿವೃದ್ಧಿ ಉಪ ಆಯುಕ್ತ ಆರ್. ವಿಜಯಕುಮಾರ, ಇತರರು ಇದ್ದರು ಪಾಲಿಕೆ ಉಪ ಆಯುಕ್ತ ಪಿ.ಬಿ. ವಿಶ್ವನಾಥ ಸ್ವಾಗತಿಸಿದರು.