ಉಡುಪಿ: ಕೋಟ ಸಮೀಪದ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬೆಳ್ಳಂಬೆಳಗ್ಗೆ ನಕಲಿ ಐಟಿ ಅಧಿಕಾರಿಗಳು ಮತ್ತು ಪೊಲೀಸರ ಸೋಗಿನಲ್ಲಿ ಬಂದ ಅಪರಿಚಿತರ ತಂಡವೊಂದು ಊರಿನಲ್ಲಿ ಆತಂಕ ಸೃಷ್ಟಿಸಿದ್ದು, ಈ ಬಗ್ಗೆ ಮನೆ ಮಾಲಕಿ ಕವಿತಾ ಎಂಬವರು ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ವಿವರ: ಜುಲೈ 25ರಂದು ಬೆಳಿಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ತಕ್ಷಣಕ್ಕೆ ನಿರ್ಲಕ್ಷಿಸಿ 9 ಗಂಟೆಗೆ ಹೊರಬಂದು ನೋಡಿದಾಗ ಯಾರೂ ಅಲ್ಲಿರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದೇ ಇದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿದರು. ಅದೂ ಸಾಧ್ಯವಾಗದೇ ಇದ್ದಾಗ ವಾಪಸ್ ಹೋಗಿರುವುದಾಗಿ ತಿಳಿಸಿದ್ದಾರೆ.