ಬಿಜಾಪುರ್ (ಛತ್ತೀಸ್‌ಗಢ): ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಹತ್ಯೆಗೈಯ್ಯಲಾಗಿದ್ದು, ಓರ್ವ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ತಾರ್ ವಿಭಾಗದ ಬಿಜಾಪುರ-ದಂತೇವಾಡ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಎನ್‌ಕೌಂಟರ್ ನಡೆದಿದೆ.
ಮೃತ ಭದ್ರತಾ ಸಿಬ್ಬಂದಿ ಛತ್ತೀಸ್‌ಗಢ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಗೆ ಸೇರಿದವರಾಗಿದ್ದು, ಗಂಗಲೂರು ಪೊಲೀಸ್ ಠಾಣಾ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಿಂದ ಇಬ್ಬರು ನಕ್ಸಲರ ಮೃತದೇಹಗಳ ಜೊತೆಗೆ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅದಿಕಾರಿಗಳು ಹೇಳಿದ್ದಾರೆ.
ಐಇಡಿ ಸ್ಪೋಟದಿಂದ ಪಾರು: ಈ ನಡುವೆ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಕ್ಸಲರು ಐಇಡಿ ಸ್ಪೋಟಿಸಿದ್ದು, ಭದ್ರತಾ ಪಡೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.