ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ 5% ಮೀಸಲಾತಿ ನೀಡುವಂತೆ ಮನವಿ

Pratibha Boi
ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ 5% ಮೀಸಲಾತಿ ನೀಡುವಂತೆ ಮನವಿ
WhatsApp Group Join Now
Telegram Group Join Now
ಬಳ್ಳಾರಿ, ಏ.9: ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ. 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ, ಗಡಿನಾಡು ಕನ್ನಡಿಗರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಆಲೂರು, ಆದೋನಿ, ರಾಯದುರ್ಗ ಹಾಗೂ ಮಡಕಶಿರ ತಾಲೂಕುಗಳ ಕನ್ನಡಿಗರ ಪರವಾಗಿ ಸಲ್ಲಿಸಿದ ಮನವಿಯಲ್ಲಿ, 1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಸಂದರ್ಭದಲ್ಲಿ ಈ ಪ್ರದೇಶಗಳು ಆಂಧ್ರಪ್ರದೇಶಕ್ಕೆ ಸೇರಿದ್ದರೂ, ಸಾಂಸ್ಕೃತಿಕವಾಗಿ ಕರ್ನಾಟಕದೊಂದಿಗೆ ನಂಟು ಹೊಂದಿರುವುದಾಗಿ ತಿಳಿಸಲಾಗಿದೆ.
ಪ್ರಸ್ತುತ ಈ ಭಾಗಗಳಲ್ಲಿ 65ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿದ್ದು, ಸುಮಾರು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ತೀವ್ರ ತಾರತಮ್ಯ ಎದುರಿಸುತ್ತಿದ್ದು, ಕರ್ನಾಟಕದಲ್ಲಿ ಪ್ರವೇಶ ಪಡೆಯುವಾಗ “ಹೊರನಾಡು ಕನ್ನಡಿಗರು” ಎಂದು ಪರಿಗಣಿಸಿ ವೃತ್ತಿಪರ ಕೋರ್ಸ್‌ಗಳಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಇದಲ್ಲದೆ, ಹೆಚ್ಚುವರಿ ಶುಲ್ಕ ವಸೂಲಿ, ವಸತಿ ನಿಲಯ ಮತ್ತು ವಿದ್ಯಾರ್ಥಿ ವೇತನ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಬೇರೆ ಭಾಷಾ ಮಾಧ್ಯಮಗಳಿಗೆ ಸೇರಿಸುತ್ತಿದ್ದು, ಕಳೆದ ವರ್ಷವೊಂದರಲ್ಲೇ ಆದೋನಿಯಲ್ಲಿ ಮೂರು ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿರುವುದಾಗಿ ಆತಂಕ ವ್ಯಕ್ತಪಡಿಸಲಾಗಿದೆ.
ಮನವಿಯಲ್ಲಿ ಪ್ರಮುಖವಾಗಿ, ಆಂಧ್ರಪ್ರದೇಶದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನಿಷ್ಠ 5% ಮೀಸಲಾತಿ ನೀಡುವುದು, ಅಲ್ಲಿ ನೀಡುವ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮಾನ್ಯಗೊಳಿಸುವುದು, ಹಾಗೂ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಈ ಬೇಡಿಕೆಗಳನ್ನು ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹಾಗೂ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ರವಾನಿಸಲು ಜಿಲ್ಲಾಧಿಕಾರಿಗಳಿಗೆ ವಿನಂತಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಕರ್ನೂಲ್ ಜಿಲ್ಲೆಯ ಶಿಕ್ಷಕರು ಮತ್ತು ಕನ್ನಡ ಸಂಘದ ಸದಸ್ಯರಾದ ಜಿ.ದೊಡ್ಡಬಸಪ್ಪ, ಎಚ್.ಎಂ. ಶಾಂತವೀರ ಮೂರ್ತಿ, ಪಿ.ಕಬೀರ್ ಸಾಬ್, ಡಿ. ರಾಮದಾಸ್, ಜೆ.ಗವಿಸಿದ್ದಪ್ಪ, ಜೆ. ಮಂಜುನಾಥ, ಡಿ. ಸಿದ್ದನಗೌಡ, ಕೆ.ಆರ್.ನಾಗರಾಜ ಶೆಟ್ಟಿ, ಹಾಗೂ ಅನಂತಪುರ ಜಿಲ್ಲೆಯ ಎಂ. ಗಿರಿಜಾಪತಿ, ಈರಾಳಪ್ಪ, ಡಿ. ದೇವರಾಜ ನಾಯಕ್, ಜಿ.ಬಸಣ್ಣ, ಜಿ. ತಿಪ್ಪೇಸ್ವಾಮಿ, ಎಂ. ಶಶಿಧರ, ಹೊನ್ನೂರಪ್ಪ, ಗಂಜಿ ಪಂಪಾಪತಿ, ಅಯ್ಯಣ್ಣ, ಶ್ರೀನಾಥ್, ನಾಗರಾಜ್, ಶ್ರೀರಾಮ್ ವೀರೇಶ್, ವೀರೇಶ್, ಕೃಷ್ಣ ನಾಯಕ, ಕೃಷ್ಣ, ಹನುಮಂತಪ್ಪ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article