ಬಳ್ಳಾರಿ: (ಡಿ.12) ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ದಿನಾಂಕ ನಿಗದಿ ಮಾಡಿ, ಸ್ವಾಗತ ಸಮಿತಿಯನ್ನು ರಚಿಸಿ, ಸಮ್ಮೇಳನವನ್ನು ಇದೇ ಆರ್ಥಿಕ ವರ್ಷದಲ್ಲೇ ಆಯೋಜಿಸುವಂತೆ ಕನ್ನಡ ಪರ ಹೋರಾಟಗಾರರು ಹಾಗೂ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಖಂಡ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ನಿಷ್ಠಿ ರುದ್ರಪ್ಪ ಅವರು, ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಡೆದ ಕ.ಸಾ.ಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೇ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಬೇಕೆಂದು ನಿರ್ಧರಿಸಿದ್ದನ್ನು ಮತ್ತೊಮ್ಮೆ ತಿಳಿಸಿದರು.
1958ರಲ್ಲಿ ಡಾ. ವಿ. ಕೃ. ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿದ್ದು, ಸುದೀರ್ಘ 68 ವರ್ಷಗಳ ನಂತರ ಜಿಲ್ಲೆಯಿಂದ ಬಂದ ಒತ್ತಾಸೆಗಳ ಹಿನ್ನೆಲೆ ಕೇಂದ್ರ ಕ.ಸಾ.ಪ ಕಾರ್ಯಕಾರಿ ಸಮಿತಿಯು ಪುನಃ ಬಳ್ಳಾರಿಯನ್ನು ಆಯ್ಕೆ ಮಾಡಿರುವುದನ್ನು ಅವರು ಸಂತೋಷದಿಂದ ಉಲ್ಲೇಖಿಸಿದರು. ಸಂಸದರು, ಶಾಸಕರು, ರಾಜಸಭಾ ಸದಸ್ಯರು, ಮಹಾನಗರ ಪಾಲಿಕೆಯ ಮಹಾಪೌರರು, ವಿವಿಧ ಧಾರ್ಮಿಕ ಪ್ರತಿಷ್ಠಾನಗಳ ಪೂಜ್ಯರು, ಸಾಹಿತಿಗಳು, ಕನ್ನಡಪರ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಒಗ್ಗಟ್ಟಿನಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಮುಂದುವರಿದು, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ನಾನು ಕನ್ನಡ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ಬಳ್ಳಾರಿಯಲ್ಲಿ ಸಮ್ಮೇಳನ ನಡೆಸಲು 2025–26ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ರೂ. 10 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಬಳ್ಳಾರಿಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ನಿಷ್ಠಿ ರುದ್ರಪ್ಪ ಹೇಳಿದರು.
ಕ.ಸಾ.ಪ ಕೇಂದ್ರ ಕಾರ್ಯಕಾರಿ ಸಮಿತಿಯು ಜೂನ್‌ದಲ್ಲಿ ಸಭೆ ಸೇರಿ, ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಸ್ತಾಕ್ ಅವರನ್ನು 88ನೇ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿ, 2025 ಡಿಸೆಂಬರ್ 26, 27 ಮತ್ತು 28ರಂದು ಸಮ್ಮೇಳನ ನಡೆಸಲು ತೀರ್ಮಾನಿಸಿತ್ತು. ಆದರೆ ಕ.ಸಾ.ಪದಲ್ಲಿ ಉಂಟಾದ ಕಾನೂನಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳ ಪರಿಣಾಮವಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿರುವುದರಿಂದ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ವಿಳಂಬ ಉಂಟಾಗಿದೆ ಎಂದರು.
ಗಡಿಜಿಲ್ಲೆಯಾದ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಸಾಧ್ಯವಾದಷ್ಟು ಬೇಗ ನಡೆಸಬೇಕೆಂಬುದು ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳ 68 ವರ್ಷಗಳ ಕನಸು. ಎಲ್ಲಾ ಧರ್ಮಗುರುಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಗಡಿಯಾಚೆಯ ಕನ್ನಡಿಗರೂ ಸಹ ಈ ನುಡಿ ಹಬ್ಬಕ್ಕಾಗಿ ಕಾತುರರಾಗಿದ್ದಾರೆ ಎಂದು ನಿಷ್ಠಿ ರುದ್ರಪ್ಪ ಹೇಳಿದರು.
ಅವರು ಮುಖ್ಯಮಂತ್ರಿಗಳು ಶೀಘ್ರವೇ ಸ್ವಾಗತ ಸಮಿತಿ ರಚನೆ, ಹೊಸ ದಿನಾಂಕ ಘೋಷಣೆ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು, ಗಡಿಭಾಗದಲ್ಲಿ ನಡೆಯಲಿರುವ ಈ ಕನ್ನಡ ನುಡಿ ಹಬ್ಬಕ್ಕೆ ಚಾಲನೆ ನೀಡುವಂತೆ ತಿಳಿಸಿ ಹಲವಾರು ಸಹಿ ಸಂಗ್ರಹಣೆ ಮಾಡಿರುವ ಪಟ್ಟಿಗಳ ಜೊತೆಗೆ ಸವಿವರದ ಮನವಿ ಪತ್ರ ನೀಡಿ ಮನವಿ ಮಾಡಿದರು.
ಮನವಿ ನೀಡುವ ಸಂದರ್ಭದಲ್ಲಿ ಸಂಡೂರು ವಿರಕ್ತ ಮಠದ ಪ್ರಭುಸ್ವಾಮಿಗಳು, ಮುಸ್ಲಿಂ ಧರ್ಮಗುರು ಖಾಜಿ ಮೋಹಿನುದ್ದಿನ್ ಸಿದ್ಧಿಖಿ, ಎಮ್ಮಿಗನೂರು ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಕಮ್ಮರ್ಚೇಡು ಮಠದ ಕಲ್ಯಾಣಸ್ವಾಮಿ, ಹೆನ್ರಿ ಡಿಸೋಜಾ, ಬಾಲ ಸಾಹಿತ್ಯ ಪುರಸ್ಕೃತ ಹಂದ್ಯಾಳ್ ಶಿವಲಿಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ಆಸಿಫ್, ರಿಜ್ವಾನ್ ಉಮರ್, ಕಲ್ಲುಕಂಬ ಪಂಪಾಪತಿ, ಅಬ್ದುಲ್ ಹೈ, ನಾಗರಾಜ್, ಹೊನ್ನೂರ್ ಸ್ವಾಮಿ, ವೀರೇಂದ್ರ ರಾವಿಹಾಳ್, ಸಂಗನಕಲ್ ವಿಜಯ್, ಬಿ.ಎಂ.ಪಾಟೀಲ್, ಹುಮಯೂನ್ ಖಾನ್, ಸತ್ಯಬಾಬು, ಶೇಖರ್, ಟಿ.ಹೆಚ್.ಎಂ ಬಸವರಾಜ್, ಬಂಡೆಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


