ಬೆಳಗಾವಿ: ಇಂದಿನ ಬಹಳಷ್ಟು ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಂಡಿದ್ದಾರೆ. ಕ್ರೀಡೆ ಸೇರಿ ಮತ್ತಿತರ ಚಟುವಟಿಕೆಯಿಂದ ದೂರ ಉಳಿದಿವೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ, ಬೆಳಗಾವಿಯಲ್ಲಿ ಬೇಸಿಗೆ ರಜೆಯಲ್ಲಿ ಆಯೋಜಿಸಿದ್ದ ಪ್ರಾಚೀನ ಕಾಲದ ಯುದ್ಧ ಕಲೆಗಳ ತರಬೇತಿ ಶಿಬಿರ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಸವ್ಯಸಾಚಿ ಗುರುಕುಲಂ, ಶ್ರೀಕ್ಷೇತ್ರ ದಕ್ಷಿಣಕಾಶಿ ಕಪಿಲೇಶ್ವರ ಮಂದಿರ ಹಾಗೂ ಶಿವಪ್ರತಿಷ್ಠಾನ ಬೆಳಗಾವಿ ಸಹಯೋಗದಲ್ಲಿ ಇಲ್ಲಿನ ಸಂಭಾಜಿ ಮೈದಾನದಲ್ಲಿ 10 ದಿನಗಳ ಕಾಲ ಬಾಲ ಸಂಸ್ಕಾರ ಹೆಸರಿನಲ್ಲಿ ಪ್ರಾಚೀನ ಕಾಲದ ಯುದ್ಧ ಕಲೆಗಳು, ಸ್ವಯಂ ರಕ್ಷಣಾ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ 10 ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹೆಣ್ಣು ಮಕ್ಕಳು ತಮ್ಮ ಮೇಲೆ ದೌರ್ಜನ್ಯ ಎಸಗಲು ಬಂದ ದುಷ್ಟರಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ತಂತ್ರವನ್ನು ಇಲ್ಲಿ ಕಲಿಸಲಾಯಿತು. ಹುಬ್ಬಳ್ಳಿ, ಹಾಸನ, ಗದಗ, ಧಾರವಾಡ ಜಿಲ್ಲೆ ಸೇರಿ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಸುಮಾರು 300ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.