ವಿಜಯಪುರ, ನವೆಂಬರ್ 1: ಕೊಯಮತ್ತೂರಿನಲ್ಲಿ 27 ವರ್ಷ ಹಿಂದೆ ಸಂಭವಿಸಿದ್ದ ಸ್ಫೋಟ ಪ್ರಕರಣದ ಆರೋಪಿಯೂ ಆಗಿರುವ ಮಿಳುನಾಡು ಮೂಲದ ಉಗ್ರ ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿಯ ವಿಜಯಪುರ ಮನೆಯಲ್ಲಿ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳ ಸಿಬ್ಬಂದಿ ಶೋಧ ನಡೆಸಿದ್ದಾಗ ಮಹತ್ವದ ದಾಖಲೆಗಳು ಸಿಕ್ಕ ಬಗ್ಗೆ ಇದೀಗ ಮಾಹಿತಿ ಹೊರಬಿದ್ದಿದೆ. ಇದೇ 2025 ರ ಜುಲೈ 9 ರಂದು ವಿಜಯಪುರ ನಗರದಲ್ಲಿ ಟೈಲರ್ ರಾಜಾನನ್ನು ತಮಿಳುನಾಡಿನ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ವಿಜಯಪುರದ ಇಬ್ರಾಹಿಂ ರೋಜಾ ಏರಿಯಾದಲ್ಲಿ ಉಗ್ರ ವಾಸವಿದ್ದ ಮನೆಯನ್ನು ತಮಿಳುನಾಡಿನ ಉಗ್ರ ನಿಗ್ರಹ ಪಡೆ ಶೋಧ ನಡೆಸಿತ್ತು. ಆ ಸಂದರ್ಭದಲ್ಲಿ, ಉಗ್ರ ಬಳಸುತ್ತಿದ್ದ ನಕಲಿ ದಾಖಲೆಗಳನ್ನು ಪತ್ತೆ ಮಾಡಿರುವುದು ಇದೀಗ ಬಯಲಾಗಿದೆ.
ಉಗ್ರನ ಮನೆಯಲ್ಲಿ ಶೋಧ ನಡೆಸಿದ್ದ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳಕ್ಕೆ ನಕಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿತ್ತು. ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿ 1998 ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ಆರೋಪಿ. ಅಂದು ಸಂಭವಿಸಿದ್ದ ಬಾಂಬ್ ಸ್ಫೋಟಗಳಲ್ಲಿ 58 ಜನರು ಸಾವನ್ನಪ್ಪಿ, 250 ಜನ ಗಾಯಗೊಂಡಿದ್ದರು. ಆ ನಂತರ ತಲೆ ಮರೆಸಿಕೊಂಡು ಹಲವು ರಾಜ್ಯಗಳಲ್ಲಿ ರಾಜಾ ಸಿದ್ಧಿಕಿ ಓಡಾಡಿದ್ದ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಟೈಲರಿಂಗ್ ಕಲಿತು, ಅಲ್ಲಿ ಬೇರೆ ಹೆಸರಿನಲ್ಲಿ ಹಲವು ವರ್ಷ ಕೆಲಸ ಮಾಡಿದ್ದ.


