ನವದೆಹಲಿ: ಭಾರತೀಯ ಚುನಾವಣೆಗಳ ಕುರಿತು ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ನೀಡಿದ ಹೇಳಿಕೆಗಳ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಟೀಕೆಗೆ ಇನ್ಸ್ಟಾಗ್ರಾಮ್ನ ಮಾತೃ ಕಂಪನಿಯಾದ ಮೆಟಾ ಇಂದು ಪ್ರತಿಕ್ರಿಯಿಸಿದೆ. ಇದೊಂದು ಅಜಾಗರೂಕತೆಯಿಂದ ನಡೆದ ತಪ್ಪು ಎಂದಿರುವ ಮೆಟಾ ತನ್ನ ಮುಂದಿನ ಪ್ರಯತ್ನಗಳಿಗೆ ಭಾರತದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.
ಭಾರತ ಸೇರಿದಂತೆ ಅನೇಕ ದೇಶಗಳ ಆಡಳಿತ ಸರ್ಕಾರಗಳು ಕೊವಿಡ್ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊವಿಡ್ ಸಂದರ್ಭವನ್ನು ಸರಿಯಾಗಿ ನಿರ್ವಹಿಸದೇ ಇದ್ದುದು ಜನ ವಿಶ್ವಾಸ ಕಡಿಮೆಯಾಗಲು ಕಾರಣವಾಗಿರಬಹುದು ಎಂದು ಹೇಳಿದ್ದರು. ಆದರೆ, ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 3ನೇ ಅವಧಿಗೆ 2024ರ ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದರು. ಹೀಗಾಗಿ, ಮಾರ್ಕ್ ಜುಕರ್ಬರ್ಗ್ ಭಾರತದ ಚುನಾವಣೆಯ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಖಂಡಿಸಿದ್ದರು. ಅಲ್ಲದೆ, ಮಾರ್ಕ್ ಜುಕರ್ಬರ್ಗ್ ಭಾರತದ ಬಗ್ಗೆ ನೀಡಿದ ತಪ್ಪು ಹೇಳಿಕೆಗೆ ಭಾರತದ ಐಟಿ ಮತ್ತು ಸಂವಹನ ವ್ಯವಹಾರಗಳ ಸಂಸದೀಯ ಸಮಿತಿ ಮೆಟಾಗೆ ಸಮನ್ಸ್ ನೀಡುವುದಾಗಿ ಘೋಷಿಸಿತ್ತು. ಆದರೆ, ಸಮನ್ಸ್ ನೀಡುವ ಮೊದಲೇ ಮೆಟಾ ಭಾರತ ಸರ್ಕಾರದ ಕ್ಷಮೆ ಯಾಚನೆ ಮಾಡಿದೆ.