ಮತ್ತಿಕೊಪ್ಪ: ಡಾ. ಪ್ರಭಾಕರ ಬ. ಕೋರೆಯವರ ೭೭ ನೇ ಹುಟ್ಟುಹಬ್ಬದ ನಿಮಿತ್ಯ ಕೆವಿಕೆಗಳ ಸುವರ್ಣ ಮಹೋತ್ಸವದ ಜ್ಯೋತಿ ಆಗಮನ ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬ. ಕೋರೆಯವರ ೭೭ ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಡಾ. ಪ್ರಭಾಕರ ಬ. ಕೋರೆಯವರ ಜನ್ಮದಿನದ ನಿಮಿತ್ಯ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವದ ಜ್ಯೋತಿಯನ್ನು ಕೆವಿಕೆ ಆವರಣದಲ್ಲಿ ಸ್ವಾಗತಿಸಲಾಯಿತು. ಕೆವಿಕೆಗಳ ಸುವರ್ಣ ಮಹೋತ್ಸವದ ಜ್ಯೋತಿಯನ್ನು ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕ ಶ್ರೀ. ಬಿ.ಆರ್. ಪಾಟೀಲ ಸ್ವೀಕರಿಸಿದರು. ನಂತರ, ಕೆವಿಕೆ ಪ್ರವೇಶ ದ್ವಾರದಿಂದ ಆಡಳಿತ ಭವನದ ವರಗೆ ರೈತರು, ರೈತ ಮಹಿಳೆಯರು, ಕೃಷಿ ಸಖಿ, ಪಶು ಸಖಿ ಹಾಗೂ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿ ಬೃಹತ್ ಮೆರಣಿಗೆಯಲ್ಲಿ ಕುಂಭ ಮತ್ತು ಡೊಳ್ಳು ವಾದ್ಯಗಳೊಂದಿಗೆ
ಜ್ಯೋತಿಯನ್ನು ತರಲಾಯಿತು.
ನಂತರ, ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರದ ಕಾರ್ಯಾಧ್ಯಕ್ಷ ಮಾತನಾಡಿ, ಅನ್ನದಾತರ ಹಾಗೂ ಕೃಷಿ ಕ್ಷೇತ್ರದ ಉನ್ನತಿಗೆ ಸದಾ ಶ್ರಮಿಸುತ್ತಾ ಬಂದಿರುವ ಡಾ. ಪ್ರಭಾಕರ ಬ. ಕೋರೆಯವರ ಮಾರ್ಗದರ್ಶನದಲ್ಲಿ ಕೃಷಿ ವಿಜ್ಞಾನ ಕೇಂದ್ರವು ಅಲ್ಪಾವಧಿಯಲ್ಲಿಯೇ ಅಪರಿಮಿತ ಸಾಧನೆ ಮಾಡಿ
ಯಶಸ್ವಿಯಾಗಿದೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
ಮಾನ್ಯರ ಮಾರ್ಗದರ್ಶನದಲ್ಲಿ ರೈತರಿಗೆ ಬೇಕಾದ ರಸಗೊಬ್ಬರಗಳು, ಕೀಟನಾಶಕ, ಕೃಷಿ ಸಾಮಗ್ರಿ, ಒಂದೇ ಸೂರಿನಡಿ ಯೋಗ್ಯ ದರದಲ್ಲಿ ಲಭ್ಯವಾಗಿಸುವ ದೃಷ್ಠಿಯಿಂದ ೨೦೨೦ ರಲ್ಲಿ ಕೆವಿಕೆ ಆವರಣದಲ್ಲಿ ಕಿಸಾನ್ ಬಜಾರ್ ತೆರೆಯಲಾಗಿದ್ದು ರೈತರಿಗೆ ಸೇವೆಯನ್ನು ಒದಗಿಸುತ್ತಿದೆ ಜೊತೆಗೆ, ಕೇಂದ್ರದಲ್ಲಿ ಮಾದರಿ ಹನಿ ನೀರಾವರಿ ಪದ್ಧತಿಯನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವುದು ಇವರ ರೈತ ಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ಕೆವಿಕೆಗಳ ಸುವರ್ಣ ಮಹೋತ್ಸವದ ಜ್ಯೋತಿಯ ಸ್ವೀಕಾರ ಸಮಾರಂಭದಲ್ಲಿ ಕೇಂದ್ರದ ಶ್ರೀಮತಿ. ಶ್ರೀದೇವಿ ಬಿ. ಅಂಗಡಿ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೆವಿಕೆ, ಮತ್ತಿಕೊಪ್ಪ
ಪ್ರಾಸ್ತಾವಿಕವಾಗಿ ಮಾತನಾಡಿ, ಸುವರ್ಣ ಮಹೋತ್ಸವದ ಜ್ಯೋತಿಯನ್ನು ದೇಶದ ಎಲ್ಲ ಕೆವಿಕೆಗಳಿಗೆ ಸಂಚಾರ ಮಾಡುತ್ತದೆ. ಈ ಜ್ಯೋತಿಯು ಕೃಷಿ ವಿಜ್ಞಾನದ ಜ್ಞಾನ ಜ್ಯೋತಿಯಾಗಿ ರೈತರಿಗೆ ಮಾರ್ಗದರ್ಶನದ ಜಾಗೃತಿ ಮಾಡಿಸುವ ಸಂಕೇತವಾಗಿದೆ. ಇದು ಮೊದಲು ಕೇರಳದ ಇಡುಕ್ಕಿ ಯಿಂದ ಪ್ರಾರಂಭಗೊಂಡು ಮತ್ತಿಕೊಪ್ಪ ಮುಖಾಂತರ ತುಕ್ಕಾನಟ್ಟಿ ಕೆವಿಕೆಗೆ
ಹೋಗಿ ಮುಂದೆ ಕೇಂದ್ರದ ವಲಯ ಕಛೇರಿ, ಬೆಂಗಳೂರಿಗೆ ಸೇರುತ್ತದೆ ಎಂದು ತಿಳಿಸಿದರು.
ಮಾನ್ಯ ಡಾ. ಪ್ರಭಾಕರ ಬ. ಕೋರೆಯವರ ೭೭ ನೇ ಹುಟ್ಟುಹಬ್ಬದ ಭಾಗವಾಗಿ ಕೃಷಿ ಸಖಿ, ಪಶು ಸಖಿ ಹಾಗೂ ರೈತ ಮಹಿಳೆಯರಿಗೆ ತೃಣಧಾನ್ಯ ಮಿಶ್ರಿತ ಅಡುಗೆ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೂ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಧಾರವಾಡ ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಎಸ್. ಎನ್.
ಕಾಂಬ್ರೇಕರ್ ಹಾಗೂ ತಾಲೂಕು ಪಂಚಾಯತನ ಶ್ರೀ. ಮಹೇಶ ಭಜಂತ್ರಿ, ಕುಮಾರಿ ಭಾಗ್ಯ ಭಾಗವಹಿಸಿದ್ದರು. ಕೇಂದ್ರದ ವಿಜ್ಞಾನಿ ಎಸ್.ಎಂ. ವಾರದ ವರದಿ ಮಂಡಿಸಿದರು. ಇಡೀ ದಿನ ನಡೆದ ಕಾರ್ಯಕ್ರಮಗಳಲ್ಲಿ ೩೦೦ ಹೆಚ್ಚು ರೈತ, ರೈತ ಮಹಿಳೆಯರು ಹಾಗೂ ಕೃಷಿ ಸಖಿ ಮತ್ತು ಪಶು ಸಖಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.