ಚಿಕ್ಕೋಡಿ, ಏ.06: ಇಂದು ಚಿಕ್ಕೋಡಿ ನ್ಯಾಯಾಲಯದ ಆವರಣಕ್ಕೆ ಹುಚ್ಚು ನಾಯಿಯೊಂದು ನುಗ್ಗಿ ಆರು ಜನರನ್ನು ಕಚ್ಚಿರುವ ಘಟನೆ ಸಂಭವಿಸಿದೆ. ಗಾಯಾಳುಗಳು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳಿಕ ಪಟ್ಟಣದ ಬಸವ ವೃತ್ತದಲ್ಲಿ ನಾಯಿ ಓಡಿಸಲು ಕೈಯಲ್ಲಿ ದೊಣ್ಣೆ ಹಿಡಿದು ಜನರು ಪ್ರಯತ್ನ ಮಾಡಿದ್ದಾರೆ. ಓರ್ವ ಸ್ಥಳೀಯ ದೊಣ್ಣೆಯಿಂದ ಹೊಡೆದು ನಾಯಿ ಕೊಲ್ಲಲು ಯತ್ನಿಸಿದರೂ ಅಲ್ಲಿಂದ ಶ್ವಾನ ಪರಾರಿಯಾಗಿದೆ. ಹುಚ್ಚು ನಾಯಿ ಓಡಾಟದ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ನಾಯಿ ನೋಡಿದರೂ ಸ್ಥಳೀಯರಲ್ಲಿ ಆತಂಕ ಮೂಡಿದೆ. ಪುರಸಭೆ ವತಿಯಿಂದ ನಾಯಿ ಹುಡುಕಾಟ ಮುಂದುವರಿದಿದೆ.
ಇದೇ ವೇಳೆ ನಾಯಿ ದಾಳಿಗೊಳಗಾದ ಕಲ್ಲಪ್ಪ ಬಸಪ್ಪ ಕೋಷ್ಟಿ ಮಾತನಾಡಿ, ನಾನು ನಡೆದುಕೊಂಡು ಹೋಗುವಾಗ ನಾಯಿ ಮಲಗಿತ್ತು. ತದನಂತರ ಎದ್ದು ನನ್ನ ಕಾಲಿಗೆ ಕಚ್ಚಿ ಮುಂದೆ ಓಡಿ ಹೋಯಿತು. ಹೋಗುವಾಗ ಎದುರುಗಡೆ ಸಿಗುವವರನ್ನು ಕಚ್ಚಿ ಹೋಗಿದೆ. ಅದಷ್ಟು ಬೇಗ ನಾಯಿಯನ್ನು ಹಿಡಿಯಬೇಕು. ಇಲ್ಲವಾದರೆ ಮುಂದೆ ಮತ್ತಷ್ಟು ಜನರಿಗೆ ನಾಯಿ ಕಚ್ಚುವ ಸಾಧ್ಯತೆ ಇದೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.