ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಜೆಡಿಎಸ್ ಮುಖಂಡನೋರ್ವನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ತಮ್ಮನಾಯಕಹಳ್ಳಿಯ ಗೇಟ್ ಬಳಿ ನಡೆದಿದೆ. ವೆಂಕಟೇಶ್ (52) ಮೃತ ಜೆಡಿಎಸ್ ಪಕ್ಷದ ಮುಖಂಡ.
ತಮ್ಮನಾಯಕನಹಳ್ಳಿ ಗೇಟ್ನಿಂದ ವೆಂಕಟೇಶ್ ತನ್ನ ಸ್ವಗ್ರಾಮ ತಮ್ಮನಾಯಕನಹಳ್ಳಿ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿ ಮಚ್ಚು ಲಾಂಗುಗಳಿಂದ ಮನಸೋಇಚ್ಛೆ ದಾಳಿ ಮಾಡಿದ್ದಾರೆ. ಅಲ್ಲದೇ ಕೈಗೆ ಲಾಂಗ್ಗಳಿಂದ ಹೊಡೆದಿದ್ದರಿಂದ ಕೈ ಸಹ ಕಟ್ ಆಗಿದೆ. ಮಾರಣಾಂತಿಕ ದಾಳಿ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವೆಂಕಟೇಶ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.