ಗದಗ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಯಾರೋ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ನಸುಕಿನ ಜಾವ ನಗರದ ದಾಸರ ಓಣಿಯಲ್ಲಿ ಜರುಗಿದೆ. ಗದಗ ನಗರಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (೨೭), ಪರಶುರಾಮ (೫೫), ಆತನ ಪತ್ನಿ ಲಕ್ಷ್ಮೀ (೪೫), ಪುತ್ರಿ ಆಕಾಂಕ್ಷಾ (೧೬) ಹತ್ಯೆಗೀಡಾದವರು.
ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಎಪ್ರಿಲ್ ೧೭ ರಂದು ಪ್ರಕಾಶ್ ಮತ್ತು ಸುನಂದಾ ಬಾಕಳೆ ಪುತ್ರ ಕಾರ್ತಿಕನ ಮದುವೆ ಫಿಕ್ಸ್ ಮಾಡುವ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ಗದಗಕ್ಕೆ ಸಂಬಂಧಿಗಳು ಆಗಮಿಸಿದ್ದರು. ಇವರೇಲ್ಲ ಮೊದಲನೇ ಮಹಡಿಯ ಕೋಣೆಯಲ್ಲಿ ಪತಿ, ಪತ್ನಿ, ಮಕ್ಕಳು ಮಲಗಿದ್ದರು. ಇವರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ನಾಲ್ವರಲ್ಲಿ ಮೂವರು ಕೊಪ್ಪಳ ಮೂಲದವರಾಗಿದ್ದಾರೆ. ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಮನೆ ಮಾಲಿಕ ಪ್ರಕಾಶ ಬಾಕಳೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಾಗಿಲು ತೆಗೆದಿದ್ದರೆ ನಮ್ಮನ್ನು ಕೊಲೆ ಮಾಡುತ್ತಿದ್ದರು ಎಂದು ಪ್ರಕಾಶ್ ಬಾಕಳೆ ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆಯಿಂದ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.
ಸುದ್ದಿ ತಿಳಿದು ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಸಚಿವ ಹೆಚ್. ಕೆ. ಪಾಟೀಲ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಪ್ರಕಾಶ್ ಬಾಕಳೆ ಕುಟುಂಬಕ್ಕೆ ಧೈರ್ಯ ಹೇಳಿದರು. ಇದೊಂದು ದುರ್ದೈವದ ಸಂಗತಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಗಡುಕರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ತಡರಾತ್ರಿ ಪ್ರಕಾಶ ಬಾಕಳೆ ಮನೆಯಲ್ಲಿ ನಾಲ್ವರ ಕೊಲೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಆಗಮಿಸಿ ಪರಿಶೀಲನೆ ನಡೆಸಿದ್ದೇವೆ. ಕಾರ್ತಿಕ್ ಬಾಕಳೆ, ಪರಶುರಾಮ ಹಾದಿಮನಿ, ಪತ್ನಿ ಲಕ್ಷ್ಮೀ ಹಾದಿಮನಿ, ಪುತ್ರಿ ಆಕಾಂಕ್ಷಾ ಹಾದಿಮನಿ ಕೊಲೆಗೀಡಾದವರು ಎಂಬ ಮಾಹಿತಿ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ. ಕೊಲೆಗೆ ಕಾರಣ ಎನೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಕೊಲೆಗಡುಕರನ್ನ ಆದಷ್ಟು ಬೇಗ ಬಂಧಿಸಲಾಗುವುದು. ಈ ಘಟನೆ ಬೆಳಗಿನ ಜಾವ ೨ ರಿಂದ ೩ ಗಂಟೆ ಒಳಗೆ ನಡೆದಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಹೇಗೆ ಬಂದರು ಎಂಬುದರ ಬಗ್ಗೆ ಕುಟುಂಬಸ್ಥರು ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುವುದು. ಸದ್ಯಕ್ಕೆ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಿಸಿಟಿವಿ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ದುಷ್ಕರ್ಮಿಗಳು ಯಾರು, ಅವರು ಹೇಗೆ ಬಂದರು ಎಂಬ ಮಾಹಿತಿ ಗೊತ್ತಿಲ್ಲ. ಬೆಳಗಿನ ಜಾವ ೩ ಗಂಟೆ ಬಾಗಿಲು ಬಡಿದ ಸದ್ದು ಕೇಳಿಸಿತು. ನಾನು ಎದ್ದು ಯಾರು ಅಂತ ಕೂಗಿದೆ. ಯಾರು ಪ್ರತಿಕ್ರಿಯಿಸಲಿಲ್ಲ. ಕಳ್ಳರು ಇರಬಹುದು ಎಂದು ೧೦೦ಕ್ಕೆ ಫೋನ್ ಮಾಡಿದೆ ಮತ್ತು ತಕ್ಷಣ ಅಕ್ಕ – ಪಕ್ಕದ ಮನೆಯವರಿಗೂ ಫೋನ್ ಮಾಡಿದೆ. ಅವರು ಬಂದು ನೋಡಿದರು. ಆದರೆ ಈ ವೇಳೆ ಯಾರು ಇರಲಿಲ್ಲ. ಬಳಿಕ ನನ್ನ ಪುತ್ರನಿಗೆ ಪೋನ್ ಮಾಡಿದೆ. ಅವನು ಕರೆ ಸ್ವೀಕರಿಸಲಿಲ್ಲ. ಆ ಬಳಿಕ ಅನುಮಾನ ಬಂದು ಅಳಿಯ ಪರಶುರಾಮ್ ಹಾಗೂ ಅವರ ಪತ್ನಿ ಲಕ್ಷ್ಮೀಗೆ ಫೋನ್ ಮಾಡಿದೆ. ಅವರು ಸಹ ಕರೆ ಸ್ವೀಕರಿಸಲಿಲ್ಲ. ಅನುಮಾನ ಹೆಚ್ಚಾಗಿದ್ದರಿಂದ ತಕ್ಷಣ ಸ್ಥಳೀಯ ಪೊಲೀಸರಿಗೆ ಫೋನ್ ಮಾಡಿದೆ. ಪೊಲೀಸರು ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಯಿತು. ನನ್ನ ಪುತ್ರ ಕಾರ್ತಿಕ್, ಅಳಿಯ ಪರಶುರಾಮ್?, ಅವರ ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಲೆಗೀಡಾಗಿದ್ದು ಈ ಕೊಲೆಗೆ ಕಾರಣ ಗೊತ್ತಿಲ್ಲ ಎಂದು ಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪತಿ ಪ್ರಕಾಶ ಹೇಳಿದ್ದಾರೆ.