ಪ್ರಿಯಕರ ಬೇಕು, ಪೋಷಕರು ಬೇಡ: ಸರ್ಕಾರಿ ವಸತಿ ನಿಲಯ ಸೇರಿದ ಬಾಲಕಿ!

Ravi Talawar
ಪ್ರಿಯಕರ ಬೇಕು, ಪೋಷಕರು ಬೇಡ: ಸರ್ಕಾರಿ ವಸತಿ ನಿಲಯ ಸೇರಿದ ಬಾಲಕಿ!
WhatsApp Group Join Now
Telegram Group Join Now

ಬೆಂಗಳೂರು,08: ಪ್ರಿಯಕರನೊಂದಿಗೆ ತೆರಳಿ, ಪೋಷಕರೊಂದಿಗೆ ಮನೆಗೆ ಹಿಂತಿರುಗಲು ನಿರಾಕರಿಸಿದ ಬಾಲಕಿಗೆ ಸರ್ಕಾರಿ ವಸತಿ ನಿಲಯದಲ್ಲಿ ವಾಸ್ತ್ಯವಕ್ಕೆ ವ್ಯವಸ್ಥೆ ಕಲ್ಪಿಸಲು ಹೈಕೋರ್ಟ್​ ಸೂಚನೆ ನೀಡಿದೆ. ಮನೆ ಬಿಟ್ಟು ನಾಪತ್ತೆಯಾಗಿರುವ ತನ್ನ ಅಪ್ರಾಪ್ತ ಮಗಳನ್ನು ಪತ್ತೆ ಹಚ್ಚಿ, ವಶಕ್ಕೆ ಒಪ್ಪಿಸುವಂತೆ ಕೋರಿ ರಾಮನಗರ ಜಿಲ್ಲೆಯ ಕಲ್ಲೂರು ನಿವಾಸಿ ಸುರೇಶ್ ಎಂಬವರು ಹೇಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ತ ಯಾದವ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ ಟಿ. ಅವರಿದ್ಧ ರಜಾಕಾಲದ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಪೀಠ, ಬಾಲಕಿಯನ್ನು ಉದ್ದೇಶಿಸಿ ತಂದೆ-ತಾಯಿಯ ಜತೆಗೆ ಮರಳಿ ಮನೆಗೆ ತೆರಳಬಹುದೇ ಎಂದು ಪ್ರಶ್ನಿಸಿತು. ಇದಕ್ಕೆ ಬಾಲಕಿ ಇಲ್ಲ ಎಂದಿದ್ದಾಳೆ. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಪೋಷಕರಿಗೆ ಮಗಳು ನಿಮ್ಮ ಜತೆ ಬರಲು ನಿರಾಕರಿಸುತ್ತಿದ್ದಾಳೆ ಎಂದು ತಿಳಿಸಿತು.

ಅಲ್ಲದೆ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಕೆಯನ್ನು ಸರ್ಕಾರದ ವಸತಿ ನಿಲಯದಲ್ಲಿ ಇರಿಸಲಾಗುತ್ತದೆ. ಪೋಷಕರು ಯಾವಾಗ ಬೇಕಾದರೂ ಭೇಟಿ ನೀಡಿ ಆಕೆಯ ಕುಶಲೋಪರಿ ವಿಚಾರಿಸಬಹುದು. ಆದರೆ ತಮ್ಮ ಜತೆ ಬರುವಂತೆ ಯಾವುದೇ ರೀತಿ ಒತ್ತಡ ನೀಡಬಾರದು ಎಂದು ಸೂಚಿಸಿದೆ.

ಬಾಲಕಿ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ಮುಂದಿನ ದಿನದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂಬ ಹಂಬಲವಿದ್ದರೆ ಅವಕಾಶ ಕಲ್ಪಿಸಬೇಕು. ನುರಿತ ಮನೋವೈದ್ಯರಿಂದ ಆಕೆಯನ್ನು ಸಮಾಲೋಚನೆ ಒಳಪಡಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

 ರಾಮನಗರ ಜಿಲ್ಲೆಯ ಯುವಕ ಹಾಗೂ ಅದೇ ಊರಿನ ಬಾಲಕಿ ಪರಸ್ಪರ ಪ್ರೀತಿಸಿ ಏ.15ರಂದು ಮನೆ ಬಿಟ್ಟು ಪರಾರಿಯಾಗಿದ್ದರು. ತಂದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆಯಾಗಿರುವ ಮಗಳನ್ನು ಪತ್ತೆ ಹಚ್ಚಿ ತನ್ನ ವಶಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದರು.

WhatsApp Group Join Now
Telegram Group Join Now
Share This Article