ಬೆಂಗಳೂರು,07: ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ 17 ವರ್ಷದ ಬಾಲಕಿಯ ತಲೆಗೆ ತೀವ್ರ ಗಾಯವಾಗಿದ್ದು, ಆಕೆಯ ತಾಯಿಗೆ ಮೂಳೆ ಮುರಿತವಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಸಮೀಪದ ವಡ್ಡರಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಗಾಯಾಳುವನ್ನು ದ್ವಿತೀಯ ಪಿಯು ವಿದ್ಯಾರ್ಥಿನಿ ಖುಷಿ ಮತ್ತು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಆಕೆಯ ತಾಯಿ ಸೋನಾಲಿ ಎಂದು ಗುರುತಿಸಲಾಗಿದೆ.
ಸಂಜೆ 6.15ರ ಸುಮಾರಿಗೆ ತಾಯಿ ಮತ್ತು ಮಗಳು ಒಣಗಿದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೊರಗೆ ಬಂದಾಗ ಭಾರಿ ಮಳೆ ಪ್ರಾರಂಭವಾಗಿದೆ. ಈ ವೇಳೆ ಅವರ ಮನೆಯ ಪಕ್ಕದ ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಕಟ್ಟಡದ ಪ್ಯಾರಪೆಟ್ನ ಹಾಲೊ ಬ್ಲಾಕ್ಗಳು ಅವರ ಮೇಲೆ ಬಿದ್ದಿವೆ. ಘಟನೆ ನಡೆದಾಗ ಸೋನಾಲಿಯ ಪತಿ ಆಟೋ ಚಾಲಕ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಖುಷಿಯ ತಲೆಯ ಮೇಲೆ ಹಾಲೊ ಬ್ಲಾಕ್ಗಳು ಬಿದ್ದಿವೆ ಮತ್ತು ಆಕೆಗೆ ಗಂಭೀರವಾದ ಗಾಯಗಳಾಗಿವೆ. ಆಕೆಯ ತಾಯಿಗೆ ಕೈ ಮುರಿದಿದೆ. ಖುಷಿಯನ್ನು ನಿಮ್ಹಾನ್ಸ್ಗೆ ಮತ್ತು ಆಕೆಯ ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿಮ್ಹಾನ್ಸ್ನಲ್ಲಿ ಯಾವುದೇ ಹಾಸಿಗೆಗಳು ಲಭ್ಯವಿಲ್ಲದ ಕಾರಣ ಖುಷಿಯನ್ನು ತಕ್ಷಣವೇ ದಾಖಲಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ಹೇಳಿದರು.
ಬೊಮ್ಮನಹಳ್ಳಿ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತ ಅಜಿತ್ ಆರ್ ಮಾತನಾಡಿ, ವಿವರಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದ್ದು, ಪಾಲಿಕೆ ಈ ಬಗ್ಗೆ ಪೊಲೀಸರೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಮತ್ತೊಂದು ಘಟನೆಯಲ್ಲಿ ಬೊಮ್ಮನಹಳ್ಳಿ ಪ್ರದೇಶದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.