ಸಿದ್ದರಾಮಯ್ಯ ಬಳಿ 6 ಬೇಡಿಕೆಗಳನ್ನಿಟ್ಟ ಸ್ವಾಮೀಜಿಗಳ ನಿಯೋಗ

Ravi Talawar
ಸಿದ್ದರಾಮಯ್ಯ ಬಳಿ 6 ಬೇಡಿಕೆಗಳನ್ನಿಟ್ಟ ಸ್ವಾಮೀಜಿಗಳ ನಿಯೋಗ
WhatsApp Group Join Now
Telegram Group Join Now

ಬೆಂಗಳೂರು, ಫೆಬ್ರವರಿ 25: ಸಿಎಂ ಸಿದ್ದರಾಮಯ್ಯ ಈ ಬಾರಿ 16ನೇ ಬಜೆಟ್ ಮಂಡಿಸಲಿದ್ದಾರೆ. ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ 2-3 ವಾರಗಳಿಂದ‌ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ವ್ಯಸ್ತರಾಗಿದ್ದಾರೆ. ವಿವಿಧ ಇಲಾಖೆಗಳ ಸಚಿವರು, ಅಧಿಕಾರಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಮುದಾಯಗಳ ಮಠಾಧೀಶರ ಜೊತೆಗೂ ಸೋಮವಾರ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ‌. ಸಚಿವರಾದ ಎಂಬಿ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಸೇರಿದಂತೆ ಲಿಂಗಾಯತ ಸಮುದಾಯದ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದೆ. ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ, ಸಾಲು ಸಾಲು ಮನವಿಗಳನ್ನು ಸಲ್ಲಿಕೆ ಮಾಡಲಾಗಿದೆ.

ಸ್ವಾಮೀಜಿಗಳ ಬೇಡಿಕೆಗಳೇನು?

  • ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೃಹತ್ ಬಸವ ಪುತ್ಥಳಿ ಪ್ರತಿಷ್ಠಾಪನೆ.
  • ಕರ್ನಾಟಕ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಬೃಹತ್ ಶರಣ ದರ್ಶನ ಕೇಂದ್ರ (ಅಕ್ಷರಧಾಮ ಮಾದರಿಯಲ್ಲಿ) ಸ್ಥಾಪಿಸುವುದು.
  • ಅಲ್ಲಿ, ಉದ್ಯಾನವನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸುವುದು ಹಾಗೂ ಪ್ರವಾಸಿ ತಾಣವನ್ನಾಗಿಸುವುದು.
  • ಎಲ್ಲ ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ ರಚಿಸುವುದು.
  • ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಸದ್ಬಳಕೆಯಾಗಲು ಅಲ್ಲಿಯೇ ವಚನ ವಿಶ್ವವಿದ್ಯಾಲಯ ಮತ್ತು ಸಂಶೋಧನ ಕೇಂದ್ರ ಆರಂಭಿಸುವುದು.
  • ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಸವಭವನ ನಿರ್ಮಿಸುವುದು.
  • ಆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು.
  • ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರ ಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸುವುದು.
  • ಮೇಲಿನ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿ ವರ್ಷ 100 ಕೋಟಿ ರೂ.ನಂತೆ 5 ವರ್ಷಗಳಲ್ಲಿ 500 ಕೋಟಿ ರೂ. ಅನುದಾನವನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಹೆಸರಿನಲ್ಲಿ ಘೋಷಣೆ ಮಾಡಬೇಕು.

ಮಠಾಧೀಶರ ಬೇಡಿಕೆಗಳಿಗೆ ಸಿಎಂ ಸಕಾರಾತ್ಮಕ ಸ್ಪಂದನೆ

ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ. ಅದಕ್ಕೇ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ. ಪೂಜ್ಯರ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article