ನೀಟ್​​ ಪರೀಕ್ಷೆಯಲ್ಲಿ ಭಾರಿ ಅವ್ಯವಹಾರ: ಅಭ್ಯರ್ಥಿಗಳೊಂದಿಗೆ 40 ಲಕ್ಷ ರೂಪಾಯಿಗೆ ಒಪ್ಪಂದ

Ravi Talawar
ನೀಟ್​​ ಪರೀಕ್ಷೆಯಲ್ಲಿ ಭಾರಿ ಅವ್ಯವಹಾರ: ಅಭ್ಯರ್ಥಿಗಳೊಂದಿಗೆ 40 ಲಕ್ಷ ರೂಪಾಯಿಗೆ ಒಪ್ಪಂದ
WhatsApp Group Join Now
Telegram Group Join Now

ಪಾಟ್ನಾ: ನೀಟ್​​ ಪರೀಕ್ಷೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಬಿಹಾರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆಗಳನ್ನು ಹಂಚಿದ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಇನ್ನೂ, 9 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗಲೂ ಸೂಚಿಸಿದ್ದು, ಅವರು ಇದರಿಂದ ತಪ್ಪಿಸಿಕೊಂಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಪರೀಕ್ಷೆಯ ಹಿಂದಿನ ದಿನ ಅಭ್ಯರ್ಥಿಗಳಿಗೆ ಹಂಚಿದ್ದು, ಅವರು ಉತ್ತರಗಳನ್ನು ಕಂಠಪಾಠ ಮಾಡಿದ್ದರು. ಇದಕ್ಕೆ ಅವರ ಪೋಷಕರ ನೆರವೂ ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ. 9 ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಶ್ನೆ ಪತ್ರಿಕೆಗಾಗಿ ಪ್ರತಿ ಅಭ್ಯರ್ಥಿಗಳೊಂದಿಗೆ 40 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಅವರಿಗೆ ನಗರದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗೆಸ್ಟ್ ಹೌಸ್ ರಿಜಿಸ್ಟರ್​ನಲ್ಲಿ ವಿದ್ಯಾರ್ಥಿ ಅನುರಾಗ್ ಯಾದವ್ ಹೆಸರು ದಾಖಲಾಗಿದ್ದು, ಅವರ ಕೊಠಡಿ ಸಂಖ್ಯೆ 440 ಎಂದು ನಮೂದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಗ್ಯಾಂಗ್​ನ ಕಿಂಗ್​ಪಿನ್ ಸಿಕಂದರ್ ಎಲ್ಲರಿಗೂ ತಂಗಲು ವ್ಯವಸ್ಥೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 9 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗಲು ಆರ್ಥಿಕ ಅಪರಾಧ ವಿಭಾಗದ ತಂಡ ನೋಟಿಸ್​ ಜಾರಿ ಮಾಡಿತ್ತು. ಅವರ ಪೋಷಕರಿಗೂ ಬುಲಾವ್​ ನೀಡಲಾಗಿತ್ತು. ಆದರೆ, ಈವರೆಗೂ ಅವರು ವಿಚಾರಣೆಗೆ ಒಳಗಾಗಿಲ್ಲ.

ಇಂತಹ ಪ್ರಕರಣದಲ್ಲಿ ನೋಟಿಸ್ ಬಂದ ಮೇಲೆ ಪಾಲಕರು ಬಂಧನ ಭೀತಿಯಿಂದ ವಿಚಾರಣೆಗೆ ಹಾಜರಾಗುವುದಿಲ್ಲ. ಕಾನೂನು ಅಭಿಪ್ರಾಯ ಪಡೆದ ನಂತರವೇ ಅವರು ತನಿಖೆಗೆ ಸಹಕರಿಸುತ್ತಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ಘಟಕವು 11 ಅಭ್ಯರ್ಥಿಗಳ ರೋಲ್ ಸಂಖ್ಯೆ ಮತ್ತು ರೋಲ್ ಕೋಡ್‌ಗಳನ್ನು ಪಡೆದುಕೊಂಡಿದೆ. ಅದರಲ್ಲಿ ಇಬ್ಬರು ಅಭ್ಯರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ 9 ಮಂದಿಯ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಮತ್ತೊಂದೆಡೆ, ಪೇಪರ್ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಆದ ಸಿಕಂದರ್​ನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಎನ್‌ಎಚ್‌ಎಐ ಅತಿಥಿ ಗೃಹದಲ್ಲಿ ಅಭ್ಯರ್ಥಿಗಳಿಗೆ ವಾಸ್ತವ್ಯ ವ್ಯವಸ್ಥೆ ಮಾಡಿಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೇ 5ರ ಪರೀಕ್ಷೆಗೆ ಮೇ 4ರಂದು ಅತಿಥಿಗೃಹದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆಗೆ ಅಭ್ಯರ್ಥಿಗಳೊಂದಿಗೆ ತಲಾ 40 ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.

WhatsApp Group Join Now
Telegram Group Join Now
Share This Article