ನಕಲಿ ಜನನ ಪ್ರಮಾಣ ಪತ್ರ ಸಲ್ಲಿಕೆ: ಮಹಿಳೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

Sandeep Malannavar
WhatsApp Group Join Now
Telegram Group Join Now

ಬಳ್ಳಾರಿ,ಫೆ.07- ಸರ್ಕಾರಿ ಸೌಲಭ್ಯ ಪಡೆಯಲು ನಕಲಿ ಜನನ ಪ್ರಮಾಣ ಪತ್ರ ದಾಖಲೆ ಸೃಷ್ಟಿಸಿ ಸಲ್ಲಿಕೆ ಮಾಡಿದ ಮಹಿಳೆಯೊಬ್ಬರ ವಿರುದ್ಧ ಇಲ್ಲಿನ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಂಶವೃಕ್ಷ ಪ್ರಮಾಣ ಪತ್ರ ಕೋರಿ ರಾಧಾ ಎಂಬುವವರು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಪ್ರತಿವಾದಿಯಾದ ಹಸೀನಾ ಅಲಿಯಾಸ್ ಅಶ್ವಿನಿ ಎಂಬುವವರು ಸಲ್ಲಿಸಿದ್ದ ಜನನ ಪ್ರಮಾಣ ಪತ್ರವನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿದೆ.
ದಾಖಲೆ ತಿದ್ದಿದ ಆರೋಪ:
ಮೊಹಮ್ಮದ್ ಅಯಾನ್ (ತಂದೆ ಚಾಂದ್ ಬಾಷಾ) ಎಂಬುವವರ ಹೆಸರಿನಲ್ಲಿದ್ದ ಅಸಲಿ ಜನನ ಪ್ರಮಾಣ ಪತ್ರವನ್ನು ಅಕ್ರಮವಾಗಿ ತಿದ್ದಿ, ಶ್ರಾವಣಿ (ತಂದೆ ಮೊದಲ ಚೆಂಚಯ್ಯ, ತಾಯಿ ಅಶ್ವಿನಿ) ಎಂಬ ಹೆಸರಿಗೆ ನಿಯಮಬಾಹಿರವಾಗಿ ತಿದ್ದುಪಡಿ ಮಾಡಲಾಗಿದೆ ಎಂದು.
ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಸೀನಾ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರು ಬಿ.ಎನ್.ಎಸ್ ಕಾಯ್ದೆ ಕಲಂ 138(4) ಜೊತೆಗೆ 3(5) ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ದಾಖಲೆಗಳನ್ನು ಸಲ್ಲಿಸುವ ಮುನ್ನ ಅವುಗಳ ನೈಜತೆಯನ್ನು ಸ್ವತಃ ಪರಿಶೀಲಿಸಿಕೊಳ್ಳಬೇಕು. ಮಧ್ಯವರ್ತಿಗಳ ಮಾತನ್ನು ನಂಬಿ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article