ಮೂಡಲಗಿ: ಪ್ರತಿ ಟನ್‌ಗೆ ೩೫೦೦ ರೂಪಾಯಿಯಂತೆ ಕಬ್ಬಿನ ಬೆಲೆ ನಿಗದಿಗಾಗಿ ಕಳೆದ ಎಂಟು ದಿನಗಳಿಂದ ಪಟ್ಟಣ ಸಮೀಪದ ಗುರ್ಲಾಪೂರ ಕ್ರಾಸ್ ನಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಬೆಂಬಲಿಸಿ ಗುರುವಾರದಂದು ಮೂಡಲಗಿ ತಾಲೂಕಾ ಸಹಕಾರ ಸಂಘಗಳ ಒಕ್ಕೂಟ ಹಾಗೂ ಮೂಡಲಗಿ ನಗರದ ವ್ಯಾಪಾರಸ್ಥರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮೂಡಲಗಿಯನ್ನು ಸಂಪೂರ್ಣ ಬಂದ್ ಮಾಡುವುದರ ಮೂಲಕ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಕಲ್ಮೇಶ್ವರ ವೃತ್ತದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋ?ಣೆ ಕೂಗುತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲರ ಅಣುಕು ಶವ ಹೊತ್ತು ಮೂಡಲಗಿಯಿಂದ ಗುರ್ಲಾಪೂರ ಕ್ರಾಸ್ ವರೆಗೆ ಶವಯಾತ್ರೆ ಮಾಡುತ್ತ ಕಬ್ಬಿನ ಬೆಲೆ ನಿಗದಿಗಾಗಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಶಕ್ತಿ ತುಂಬಿದರು. ಪ್ರತಿಭಟನೆಯಲ್ಲಿ ಮೂಡಲಗಿ ತಾಲೂಕಿನ ಅನೇಕ ಸಹಕಾರಿ ಸಂಘಗಳ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ವರ್ಗದವರು, ಪಟ್ಟಣದ ಅಂಗಡಿ ಮುಂಗಟ್ಟುಗಳ ಮಾಲೀಕರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿ ಬೆಂಬಲ ವ್ಯಕ್ತ ಪಡಿಸಿದರು.


