ಬೆಳಗಾವಿ, ಜೂನ್.10: ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದೆ. ಆರ್‌ಎಂಪಿ ವೈದ್ಯ ಸೇರಿ ಐದು ಜನರನ್ನು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಅಬಾಷನ್ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಏಳು, ಎಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಸದ್ಯ ಪೊಲೀಸರು ಈ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮದುವೆಗೂ ಮುಂಚೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಹೆಣ್ಮುಕ್ಕಳನ್ನು ಟಾರ್ಗೆಟ್ ಮಾಡಿ ಆರ್‌ಎಂಪಿ ವೈದ್ಯ ಅಬ್ದುಲ್ ಎಂಬುವವರು ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಮಕ್ಕಳಿಲ್ಲದವರಿಗೆ ಅರವತ್ತು ಸಾವಿರದಿಂದ ಒಂದೂವರೆ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.