ಹುಕ್ಕೇರಿ30 : ಪಟ್ಟಣದ ಹೊರವಲಯದ ಕ್ಯಾರಗುಡ್ಡ್ ಬಳಿಯ ಅವುಜೀಕರ ಧ್ಯಾನ ಯೋಗಾಶ್ರಮದ ಮಠದಲ್ಲಿ ಅಕ್ರಮವಾಗಿ ನುಗ್ಗಿ ಧಾಂದಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೇರಿದಂತೆ 501 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಮತ್ತು 500 ಜನರ ಮೇಲೆ ಆಶ್ರಮ ಮಠದ ಮಲ್ಲೇಶ್ವರ ಮಹಾರಾಜರು ದೂರು ದಾಖಲಿಸಿದ್ದು ತನಿಖೆ ಮುಂದುವರೆದಿದೆ. ಇದೇ ವೇಳೆ ಕಲ್ಲೋಳಕರ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆAದೂ ಹೇಳಲಾಗಿದೆ.
ಇಲ್ಲಿನ ಅವುಜೀಕರ ಧ್ಯಾನ ಯೋಗಾಶ್ರಮದಲ್ಲಿ ಸೋಮವಾರ ಮಧ್ಯಾಹ್ನ 1ರ ಸುಮಾರಿಗೆ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಮತ್ತವರ ನೂರಾರು ಕಾರ್ಯಕರ್ತರು ಏಕಾಏಕಿಯಾಗಿ ನುಗ್ಗಿ ಧಾಂದಲೆ ನಡೆಸಿದಲ್ಲದೇ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸ್ವಾಮೀಜಿ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಮುಖ ಆರೋಪಿ ಕಲ್ಲೋಳಕರ ಮತ್ತು ಅವರ ಕಾರ್ಯಕರ್ತರು ಕಾನೂನು ಬಾಹಿರ ಸಭೆ ಸೇರಿರುವುದು, ಗಲಭೆಯಲ್ಲಿ ಭಾಗಿಯಾಗಿರುವುದು, ದೊಂಬಿಗೆ ಯತ್ನ, ಉದ್ದೇಶಪೂರ್ವಕವಾಗಿ ಗುಂಪುಗೂಡಿರುವುದು, ಸಾದಾ ಸ್ವರೂಪ ಗಾಯಪಡಿಸಿರುವುದು, ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.
ಇಂಚಗೇರಿ ಸಂಪ್ರದಾಯದ ಅವುಜೀಕರ ಆಶ್ರಮದಲ್ಲಿ ಏಕಾಏಕಿ ನುಗ್ಗಿದ ಕಲ್ಲೋಳಕರ ಹಾಗೂ ಅವರ ಬೆಂಬಲಿತ ಕಾರ್ಯಕರ್ತರು ವಿಚಿತ್ರವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಗೂಂಡಾವರ್ತನೆ ತೋರಿದ ಚುನಾವಣಾ ಪ್ರಚಾರಾರ್ಥ ಕಾರ್ಯಕರ್ತರು ಆಶ್ರಮದ ಸ್ವಾಮೀಜಿಗಳ ಮೈಮೇಲೂ ಎರಗಿ ಆವಾಜ್ ಹಾಕಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ದಂಡ ಸಂಹಿತೆ ಕಲಂ 143, 147, 323 ಸಹ ಕಲಂ 504, 149 ರ ಅನ್ವಯ ದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ರೀಮಠದಲ್ಲಿ ನಡೆದಿರುವ ದಾಂಧಲೆ ದುಷ್ಕೃತ್ಯವನ್ನು ನಾಡಿನ ಅನೇಕ ಶ್ರೀಗಳು ಖಂಡಿಸಿ, ಧಾರ್ಮಿಕ ಪರಂಪರೆ ಅಪಮಾನಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.