ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಹೊಸ ವರ್ಷದ ಮೊದಲ ದಿನವೇ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ರೆಡ್ಡಿ ಸೇರಿ 22 ಜನರ ವಿರುದ್ಧ ಜನಾರ್ಧನ ರೆಡ್ಡಿ ಮನೆಗೆಲಸದ ವ್ಯಕ್ತಿ ನಾಗರಾಜ್ ದೂರು ನೀಡಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಗೆ ಅತಿಕ್ರಮ ಪ್ರವೇಶ, ಜಾತಿನಿಂದನೆ, ಹಲ್ಲೆಗೆ ಯತ್ನ ಆರೋಪದಡಿ ಬ್ರೂಸ್ ಪೇಟೆ ಠಾಣೆಯಲ್ಲಿ ಶಾಸಕ ಭರತ್ ರೆಡ್ಡಿ ಅವರ ಆಪ್ತರಾದ ಸತೀಶ್ ರೆಡ್ಡಿ, ಚಾನಾಳ ಶೇಖರ್, ಲೋಕೇಶ್ ಅವಂಬಾವಿ, ಗಂಗಾಧರ ಸೇರಿ 22 ಜನರ ವಿರುದ್ದ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ಭರತ್ ರೆಡ್ಡಿ ಅವರ ಬೆಂಬಲಿಗ ಚಾನಾಳ ಶೇಖರ್ ಅವರು ಜನಾರ್ದನ್ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ದೂರು ನೀಡಿದ್ದರು. ಇಂದು ಜನಾರ್ದನ ರೆಡ್ಡಿ ಅವರ ಬೆಂಬಲಿಗ ಮನೆಗೆಲಸದ ವ್ಯಕ್ತಿ ನಾಗರಾಜ್ ಅವರು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಜನಾರ್ದನ ರೆಡ್ಡಿ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ನಾಗರಾಜ ಎರಡು ಪ್ರತ್ಯೇಕ ದೂರು ನೀಡಿದ್ದಾರೆ.
ನಿನ್ನೆ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ಭೇಟಿ ವೇಳೆ ಸ್ವತಃ ಹೆಚ್ಚುವರಿ ಎಸ್ಪಿ ಅವರ ನೇತೃತ್ವದಲ್ಲಿ ಬ್ರೂಸ್ ಪೇಟೆ ಠಾಣೆ ಪೊಲೀಸರು ಜನಾರ್ದನ ರೆಡ್ಡಿ ಅವರ ಮನೆಗೆ ಆಗಮಿಸಿ ದೂರು ಪಡೆದಿದ್ದಾರೆ.
ಜನಾರ್ದನ ರೆಡ್ಡಿ ನೀಡಿರುವ ದೂರಿನಲ್ಲಿ ಶಾಸಕ ಭರತ್ ರೆಡ್ಡಿ 5ನೇ ಆರೋಪಿ ಆಗಿದ್ದು, ನಾಗರಾಜ್ ನೀಡಿದ ದೂರಿನಲ್ಲಿ ಶಾಸಕ ಭರತ್ ರೆಡ್ಡಿ 3ನೇ ಆರೋಪಿ ಆಗಿದ್ದಾರೆ. ಬಳ್ಳಾರಿ ನಗರದ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಾರ್ದನ ರೆಡ್ಡಿ ವಿರುದ್ಧ ಎಫ್ಐಆರ್: ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಆದ ಮೊದಲ ಘರ್ಷಣೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ 11 ಮಂದಿ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ನಿನ್ನೆಯೇ ಪ್ರಕರಣ ದಾಖಲಾಗಿತ್ತು. ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರು ಆಧರಿಸಿ ಜನಾರ್ದನ ರೆಡ್ಡಿಯನ್ನು ಎ1 ಆರೋಪಿ ಮಾಡಲಾಗಿದೆ. ಸೋಮಶೇಖರ ರೆಡ್ಡಿ ಎ2, ಶ್ರೀರಾಮುಲು ಎ3, ಪಾಲಿಕೆ ವಿರೋಧ ಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ ಎ4 ಆರೋಪಿಯನ್ನಾಗಿ ಮಾಡಲಾಗಿದೆ. ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.


