ದ್ವೇಷ ಭಾವನೆ ಕೆರಳಿಸುವ ಹೇಳಿಕೆ: ದಿಂಗಾಲೇಶ್ವರ ಶ್ರೀ ವಿರುದ್ಧ ಪ್ರಕರಣ ದಾಖಲು

Ravi Talawar
ದ್ವೇಷ ಭಾವನೆ ಕೆರಳಿಸುವ ಹೇಳಿಕೆ: ದಿಂಗಾಲೇಶ್ವರ ಶ್ರೀ ವಿರುದ್ಧ ಪ್ರಕರಣ ದಾಖಲು
WhatsApp Group Join Now
Telegram Group Join Now

ನವಲಗುಂದ,05: ಜಾತಿ, ಧರ್ಮ ಹಾಗೂ ಸಮುದಾಯಗಳ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಮೂಡಿಸುವ ಹೇಳಿಕೆ ನೀಡಿದ ಆರೋಪದಡಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ನವಲಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 2 ರಂದು ನವಲಗುಂದ ಗಾಂಧಿ ಮಾರ್ಕೆಟ್‌ನಲ್ಲಿ ನಡೆದ ಸಮಾವೇಶದಲ್ಲಿ ಶ್ರೀಗಳು ಜಾತಿ, ಧರ್ಮ ಆಧರಿತವಾಗಿ ಮಾತನಾಡಿದ್ದರು. ಅಲ್ಲದೇ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ತಮ್ಮ ಜಾತಿ ಮೇಲಿದ್ದಷ್ಟು ಪ್ರೀತಿ ಲಿಂಗಾಯಿತ ಮತ್ತು ಇತರೆ ಸಮುದಾಯಗಳ ಮೇಲಿಲ್ಲ. ಲಿಂಗಾಯತ ಮತ್ತಿತರ ಸಮುದಾಯಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಹೇಳುವ ಮೂಲಕ ಜಾತಿ, ಧರ್ಮದ ನಡುವೆ ದ್ವೇಷ ಭಾವನೆ ಮೂಡಿಸುವ ಮಾತುಗಳನ್ನಾಡಿದ್ದಾರೆ ಎಂದು ಪ್ರಕರಣದಲ್ಲಿ ದೂರಲಾಗಿದೆ.

ಶಿರಹಟ್ಟಿ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ 10.30ಕ್ಕೆ ಸಭೆ ಕರೆಯಲಾಗಿತ್ತು. ಸಭೆ ಇನ್ನೇನು ಆರಂಭವಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು, ನೀತಿ ಸಂಹಿತೆ ಇರುವ ಕಾರಣಕ್ಕೆ ಅನುಮತಿ ಪಡೆಯದೇ, ಸಭೆ-ಸಮಾರಂಭ ನಡೆಸಲು ಅವಕಾಶ ನೀಡಲು ಬರುವುದಿಲ್ಲ. ಸಭೆಗೆ ಪರವಾನಗಿ ಕಡ್ಡಾಯವಾಗಿದೆ. ದಯವಿಟ್ಟು ನಮ್ಮ ಕರ್ತವ್ಯಕ್ಕೆ ಸಹಕಾರ ನೀಡುವಂತೆ ಅಧಿಕಾರಿಗಳು ದಿಂಗಾಲೇಶ್ವರ ಶ್ರೀಗಳ ಬಳಿ ಮನವಿ ಮಾಡಿಕೊಂಡರು.

ಆಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಗಳು ಇದು ಧಾರ್ಮಿಕ ಮಠಾಧೀಶರ ಸಭೆಯಾಗಿದ್ದು, ನಾವು ಅನುಮತಿ ಕೇಳಿದರೂ ನೀಡಿಲ್ಲ ಎಂದು ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದರು. ಅಲ್ಲದೆ ನಾವು ಸಭೆ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿಯುವುದರ ಜತೆಗೆ, ಎಲ್ಲ ಸ್ವಾಮಿಗಳೊಂದಿಗೆ ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

 

WhatsApp Group Join Now
Telegram Group Join Now
Share This Article