ಹಾವೇರಿ, ಜುಲೈ.08: ರಾಜ್ಯದಲ್ಲಿ ಡೆಂಗ್ಯೂ ಅಟ್ಟಹಾಸ ಹೆಚ್ಚಾಗಿದೆ. ಪ್ರತಿ ದಿನ ಒಂದಲ್ಲವೊಂದು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕ ಬಲಿಯಾಗಿದ್ದಾನೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ 13 ವರ್ಷದ ಪ್ರೇಮ್ಕುಮಾರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಪ್ರೇಮ್ ಕುಮಾರ್ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಣೆಬೆನ್ನೂರು ಟಿಹೆಚ್ಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗದಲ್ಲಿ ಮಹಾಮಾರಿ ಡೆಂಗ್ಯೂಗೆ 5 ವರ್ಷದ ಮಗು ಬಲಿಯಾಗಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ 2 ಗಂಟೆ ಕಾಲ ಮಗು ನರಳಾಡಿದೆ ಎಂದು ಮೃತ ಚಿರಾಯಿ ತಂದೆ ಮಂಜುನಾಥ, ತಾಯಿ ಸುಜಾತಾ ಆಕ್ರೋಶ ಹೊರಹಾಕಿದ್ರು. ಅಡ್ಮಿಟ್ ಮಾಡಿಕೊಳ್ಳಲು ಸಹ ಜಿಮ್ಸ್ ವೈದ್ಯರು ಹಿಂದೇಟು ಹಾಕಿದ್ದರು. ನಮ್ಮಲ್ಲಿ ಬೆಡ್ ಇಲ್ಲ ಬೇರೆ ಕಡೆ ಹೋಗಿ ಅಂತಾ ವೈದ್ಯರು ಹೇಳಿದ್ರು ಅಂತಾ ಕಿಡಿ ಕಾರಿದ್ರು.
ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ಮತ್ತೊಬ್ಬ ಯುವತಿ ಬಲಿಯಾಗಿದ್ದಾಳೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ 23 ವರ್ಷದ ಸುಪ್ರಿತಾ ಸಾವನ್ನಪ್ಪಿದ್ದಾಳೆ. ಅರಸೀಕೆರೆ ತಾಲೂಕಿನ ಮುದುಡಿ ತಾಂಡಾದ ಜೂಲೂನಾಯ್ಕ, ಸುಮಿತ್ರಾದೇವಿ ಎಂಬುವವರ ಪುತ್ರಿ ಸುಪ್ರಿತಾ ಸಾವನ್ನಪ್ಪಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 4 ದಿನಗಳ ಹಿಂದೆ ತೀವ್ರ ಜ್ವರ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಪ್ರಿತಾಗೆ ಬಹು ಅಂಗಾಗ ವೈಫಲ್ಯ ಆಗಿತ್ತು. ಬಳಿಕ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.