ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿ ಕೋಮುಗಲಭೆ ಭುಗಿಲೆದಿದ್ದು, ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ಎರಡು ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಇಲ್ಲಿನ ಸೂರ್ ಸಾಗರ್ ಪ್ರದೇಶದ ರಾಜಾರಾಮ್ ವೃತ್ತದ ಬಳಿಯ ಈದ್ಗಾ ಹಿಂಭಾಗದಲ್ಲಿ ಗೇಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಘರ್ಷಣೆ ಆರಂಭವಾಗಿದೆ. ಈದ್ಗಾ ಹಿಂಬದಿಯಲ್ಲಿ ಜನರ ಓಡಾಟ ಇಲ್ಲದಂತೆ ಗೇಟ್ ಹಾಕುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ನಿನ್ನೆ ರಾತ್ರಿ, ಉದ್ವಿಗ್ನತೆ ಉಲ್ಬಣಿಸಿ ಕೆಲವರು ಕಲ್ಲು ತೂರಾಟ ನಡೆಸಿದರು. ಹೀಗಾಗಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಡಿಸಿಪಿ ರಾಜೇಶ್ ಕುಮಾರ್ ಯಾದವ್ ಹೇಳಿ ದ್ದಾರೆ.
“ಒಂದು ಅಂಗಡಿ ಮತ್ತು ಟ್ರಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ ಮತ್ತು ಜೀಪ್ ನ್ನು ಧ್ವಂಸಗೊಳಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪೊಲೀಸರು ಲಾಠಿ ಹಾಗೂ ನಾಲ್ಕೈದು ಸುತ್ತು ಅಶ್ರುವಾಯು ಸೆಲ್ ಸಿಡಿಸಿ ಜನರನ್ನು ಚದುರಿಸಿದ್ದಾರೆ. ಶುಕ್ರವಾರ ತಡರಾತ್ರಿ ವೇಳೆಗೆ ಪರಿಸ್ಥಿತಿ ಹತೋಟಿಗೆ ಬಂದರೂ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶನಿವಾರ ಬೆಳಗ್ಗೆ ಭಾರೀ ಪೊಲೀಸ್ ಮತ್ತು ರಾಜಸ್ಥಾನ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಎರಡೂ ಕಡೆಯ ದೂರುಗಳ ಆಧಾರದ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಾಜೇಂದ್ರ ಸಿಂಗ್ ಹೇಳಿದ್ದಾರೆ. ಎರಡೂ ಕಡೆಯ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಂಕಿತರನ್ನು ಬಂಧಿಸಲು ಪೊಲೀಸರು ಇನ್ನೂ ಸ್ಥಳೀಯ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.