ಚೆನ್ನೈ: ರಾಜ್ಯದ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ 34 ಜನರು ಸಾವಿಗೀಡಾಗಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದು, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 50,000 ರೂ. ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಅಲ್ಲದೆ ಘಟನೆ ಕುರಿತು ವರದಿ ಸಲ್ಲಿಸುವಂತೆ ತನಿಖಾ ಆಯೋಗಕ್ಕೆ ಆದೇಶಿಸಿದ್ದಾರೆ.
ಈಮಧ್ಯೆ, ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳುನಾಡು ಸರ್ಕಾರದ ವಿರುದ್ಧ ಜೂನ್ 22 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಘೋಷಿಸಿದ್ದಾರೆ.
ಮೂಲಗಳ ಪ್ರಕಾರ ಒಟ್ಟು 107 ಜನರನ್ನು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 59 ಜನರನ್ನು ಸೇಲಂ, ವಿಲ್ಲುಪುರಂ ಮತ್ತು ಪುದುಚೇರಿಯಂತಹ ಇತರ ಸ್ಥಳಗಳ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಉಲ್ಲೇಖಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ. ತಮಿಳುನಾಡು ಪೊಲೀಸರು ಕಲ್ಲಕುರಿಚಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಸೇಲಂ ರೇಂಜ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಇಎಸ್ ಉಮಾ ಮಾತನಾಡಿ, ‘ಕಲ್ಲಕುರಿಚಿಗೆ ನಾವು ಏಳು ಎಸ್ಪಿಗಳನ್ನು ನಿಯೋಜಿಸಿದ್ದೇವೆ ಮತ್ತು ಈ ಅಧಿಕಾರಿಗಳು ತಮ್ಮ ಅಡಿಯಲ್ಲಿ ಕನಿಷ್ಠ 1,000 ಪೊಲೀಸ್ ಸಿಬ್ಬಂದಿಯನ್ನು ಹೊಂದಿರುತ್ತಾರೆ. ಈಗ ಜಿಲ್ಲೆಯಲ್ಲಿ ಸಕ್ರಿಯ ಭದ್ರತಾ ಕರ್ತವ್ಯದಲ್ಲಿದ್ದಾರೆ. ನಾವು ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಮೃತದೇಹಗಳನ್ನು ಸುರಕ್ಷಿತವಾಗಿ ರವಾನಿಸಲಾಗಿದೆ’ ಎಂದು ಹೇಳಿದರು.
ಕಲ್ಲಕುರಿಚಿ ಅಕ್ರಮ ಮದ್ಯ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆಗೆ ಎಐಎಡಿಎಂಕೆ ವಕೀಲರು ಮದ್ರಾಸ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿಗಳಾದ ಡಿ ಕೃಷ್ಣಕುಮಾರ್ ಮತ್ತು ಕೆ ಕುಮಾರೇಶ್ ಬಾಬು ಅವರಿದ್ದ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಜೂನ್ 21ರಂದು ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.