ಮೈಸೂರು: ಹಿರಿಯ ರಂಗಕರ್ಮಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕ ನ.ರತ್ನ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ನ.ರತ್ನ, ಅನೇಕ ನಾಟಕಗಳೊಂದಿಗೆ ರಂಗಭೂಮಿಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ದುರಾದೃಷ್ಟವಶಾತ್, ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಇವರ ನಿಧನ ರಂಗಭೂಮಿಗೆ ತುಂಬಲಾರದ ನಷ್ಟ.
ನ.ರತ್ನ ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರಿಗೆ ಅಜಿತ್, ಕವಿತಾರತ್ನ ಎಂಬಿಬ್ಬರು ಮಕ್ಕಳಿದ್ದಾರೆ. ಅವರು ರಚಿಸಿದ ‘ಶಾಂತಿ ಕುಟೀರ’ ನಾಟಕ ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ಅಂತ್ಯಕ್ರಿಯೆ ಇಂದು ಮೈಸೂರಿನಲ್ಲಿ ನಡೆಯಲಿದೆ.