ಅಕ್ರಮವಾಗಿ ಕಪ್ಪೆಗಳ ಸಾಗಾಟ ಜಾಲ ಪತ್ತೆ: 40ಕ್ಕೂ ಹೆಚ್ಚು ಬುಲ್ ಕಪ್ಪೆಗಳ ವಶ

Ravi Talawar
ಅಕ್ರಮವಾಗಿ ಕಪ್ಪೆಗಳ ಸಾಗಾಟ ಜಾಲ ಪತ್ತೆ:  40ಕ್ಕೂ ಹೆಚ್ಚು ಬುಲ್ ಕಪ್ಪೆಗಳ ವಶ
WhatsApp Group Join Now
Telegram Group Join Now

ಕಾರವಾರ: ಮಳೆಗಾಲ ಆರಂಭವಾದ ಹಿನ್ನೆಲೆ ಅಕ್ರಮವಾಗಿ ಕಪ್ಪೆಗಳನ್ನು ಸಾಗಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಗೋವಾದ ಹೊಟೇಲ್​ವೊಂದಕ್ಕೆ ಖಾಸಗಿ ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದರೂ ಎನ್ನಲಾದ 40ಕ್ಕೂ ಹೆಚ್ಚು ಬುಲ್ ಕಪ್ಪೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರವಾರದಲ್ಲಿ ವಶಕ್ಕೆ ಪಡೆದಿದ್ದಾರೆ.

ನಗರದ ಕಾಳಿ ಸೇತುವೆ ಬಳಿ ಶಾಂತಾದುರ್ಗಾ ಎನ್ನುವ ಖಾಸಗಿ ಬಸ್ ಮೂಲಕ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಕಾರವಾರದಿಂದ ಗೋವಾದ ಮಡಗಾಂವ್​ಗೆ ಸಾಗಿಸುತ್ತಿದ್ದ ಒಟ್ಟು 41 ಬುಲ್ ಕಪ್ಪೆಗಳನ್ನು ರಕ್ಷಣೆ ಮಾಡಿದ್ದು, ಗೋವಾ ಕಾಣಕೋಣ್ ನಿವಾಸಿ ಚಾಲಕ ಸಿದ್ದೇಶ್ ದೇಸಾಯಿ ನಿರ್ವಾಹಕ ಜಾನು ಲೂಲಿಮ್ ಬಂಧಿಸಿದ್ದಾರೆ.

ಗೋವಾ ಜನರು ಸೇರಿ, ವಿದೇಶಿಗರಿಗೂ ಈ ಕಪ್ಪೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ. ಇದಕ್ಕೆ 2 ರಿಂದ 3 ಸಾವಿರ ರೂ ದರ ಹೊಟೇಲ್‌ಗಳಲ್ಲಿ ಪಡೆಯಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶವಾದ ಕಾರವಾರ, ಅಂಕೋಲಾ ಸೇರಿದಂತೆ ಇತರ ಭಾಗದಿಂದ ಇವುಗಳನ್ನು ಕಳೆದ ಹಲವು ವರ್ಷಗಳಿಂದ ಮಳೆಗಾಲದ ವೇಳೆಗೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಒಂದು ದೊಡ್ಡ ಕಪ್ಪೆಗೆ ಕನಿಷ್ಟ 500 ರೂ. ದರ ನೀಡಲಾಗುತ್ತದೆ. ಹೀಗಾಗಿ ಇವುಗಳ ಬೇಟೆ ಕಾರವಾರ, ಅಂಕೋಲಾ ಭಾಗದಲ್ಲಿ ಅತೀ ಹೆಚ್ಚಿದ್ದು, ಜೀವಂತವಾಗಿ ಹಿಡಿದು ಗೋವಾಕ್ಕೆ ಸಾಗಿಸಲಾಗುತ್ತದೆ ಎನ್ನುವ ಮಾಹಿತಿ ಇದೆ.

ಅರಣ್ಯ ಕಾಯ್ದೆ ಅಡಿ ಈ ಕಪ್ಪೆಗಳ ಬೇಟೆ ಮಾಡುವುದು ಕಾನೂನು ಬಾಹಿರವಾಗಿದೆ. ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಈ ಕಪ್ಪೆಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಕಪ್ಪೆಗಳ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತವೆ. ಕಳ್ಳ ಸಾಗಣೆದಾರರು ಹೊಲ, ಗಿಡಗಳ ಪೊದೆಗಳಲ್ಲಿ ಅಡಗಿರುವ ಕಪ್ಪೆಗಳನ್ನು ಹುಡುಕಿ ಹಿಡಿಯುತ್ತಾರೆ. ಬಳಿಕ ಗೋವಾಕ್ಕೆ ತೆಗೆದುಕೊಂಡು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಾರೆ. ಗಾತ್ರಗಳಿಗೆ ತಕ್ಕಂತೆ ವಿವಿಧ ಕಪ್ಪೆಗಳಿಗೆ ವಿವಿಧ ಬೆಲೆಗಳನ್ನು ನೀಡಿ ಖರೀದಿಸಲಾಗುತ್ತದೆ. ಗೋವಾದ ರೆಸ್ಟೋರೆಂಟ್‌ಗಳಲ್ಲಿ ವಿದೇಶಿಯರಿಗೆ ಪ್ರಿಯವಾದ ಆಹಾರ ಇದಾಗಿದ್ದು, ಹೆಚ್ಚು ಲಾಭ ತಂದುಕೊಡುತ್ತದೆ. ಈ ಕಾರಣದಿಂದಲೇ ಕಪ್ಪೆಗಳ ಅಕ್ರಮ ಸಾಗಾಟವಾಗುತ್ತಿದ್ದು, ಇದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗೋವಾದಲ್ಲಿ ಜಂಪಿಂಗ್ ಚಿಕನ್: ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿಗುವ ವಿವಿಧ ಜಾತಿಯ ಕಪ್ಪೆಗಳ ಖಾದ್ಯ ಅಂದ್ರೆ, ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ತುಂಬಾ ಇಷ್ಟವಾಗುತ್ತದೆ. ಗೋವಾದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಈ ಕಪ್ಪೆಗಳಿಗೆ ಬಹುಬೇಡಿಕೆಯಿದೆ. ಇಲ್ಲಿನ ಹೊಟೇಲ್‌ಗಳಲ್ಲಿ ಕಪ್ಪೆಯ ಖಾದ್ಯಗಳಿಗೆ ಜಂಪಿಂಗ್​ ಚಿಕನ್ ಎನ್ನುವುದು ಪ್ರಚಲಿತವಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಳ್ಳ ಸಾಗಾಟಗಾರರ ಹಾವಳಿಯಿಂದಾಗಿ ವಿವಿಧ ಜಾತಿಗಳ ಕಪ್ಪೆಗಳು ಕಣ್ಮರೆಯಾಗಲು ಪ್ರಾರಂಭವಾಗುತ್ತದೆ. ಮುಂಗಾರು ಪ್ರಾರಂಭವಾದ ತಕ್ಷಣವೇ ಸುಮಾರು ಒಂದು ತಿಂಗಳ ಕಾಲ ನೀರು ತುಂಬುವ ಪ್ರದೇಶಗಳಲ್ಲಿ ಈ ಕಪ್ಪೆಗಳು ಕಾಣಸಿಗುತ್ತಿವೆ.

WhatsApp Group Join Now
Telegram Group Join Now
Share This Article