ಬೆಂಗಳೂರು: ಮಾಧ್ಯಮ ದೊರೆ,ಈನಾಡು ಮುಖ್ಯಸ್ಥ,ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ನಿಧನಕ್ಕೆ ಈಟಿವಿ ಬಳಗ ಕಂಬನಿ ಮಿಡಿದಿದ್ದು ನುಡಿನಮದ ಮೂಲಕ ಶ್ರದ್ದಾಂಜಲಿ ಸಲ್ಲಿಕೆ ಮಾಡಿತು. ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಬದ್ದತೆ,ವೃತ್ತಿಪರತೆಯೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಂಡ ಬಗೆಯನ್ನು ಪತ್ರಕರ್ತರು ನೆನಪಿಸಿಕೊಂಡರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈಟಿವಿ ಬಳಗದವತಿಯಿಂದ ಈನಾಡು ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರಾಮೋಜಿ ರಾವ್ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.ಈಟಿವಿಯಲ್ಲಿ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಿ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ನುಡಿನಮನದ ಮೂಲಕ ರಾಮೋಜಿ ರಾವ್ ಅವರೊಂದಿಗೆ ಕಳೆದ ಕ್ಷಣಗಳು, ಅವರ ಸಾಧನತೆಗಳು, ವೃತ್ತಿಪರತೆಗೆ ಸಿಗುತ್ತಿದ್ದ ಪ್ರೋತ್ಸಾಹ, ಸಂಪಾದಕೀಯದಲ್ಲಿ ಹಸ್ತಕ್ಷೇಪ ಮಾಡದಿರುವುದು ಸೇರಿದಂತೆ ಮಾಧ್ಯಮವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಪರಿಯನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ನರೇಂದ್ರ ಪುಪ್ಪಳ ಮಾತನಾಡಿ,ದಶಕದ ಕಾಲ ರಾಮೋಜಿ ರಾವ್ ಅವರ ಜೊತೆ ಹತ್ತಿರದಲ್ಲಿ ಕೆಲಸ ಮಾಡಿದ ಖುಷಿ ಇದೆ, ಉದ್ಯಮದ ಒತ್ತಡದಲ್ಲಿಯೂ ಅವರು ಸುದ್ದಿ, ಸಂಪಾದಕೀಯ,ಮಾಧ್ಯಮ ಸಂಸ್ಥೆಯನ್ನು ನಿರ್ಲಕ್ಷ್ಯ ಮಾಡಲಿಲ್ಲ, ಜೀವನ ಎನ್ನುವುದು ಪ್ರಯಾಣ, ರಾಮೋಜಿ ಸರ್ ಜೀವನದಲ್ಲಿ ನಾವೆಲ್ಲಾ ಪ್ರಯಾಣಿಸಿದ ಖುಷಿ ಇದೆ ಎಂದರು.
ಹಿರಿಯ ಪತ್ರಕರ್ತ ಶಿವಶಂಕರ್ ಮಾತನಾಡಿ, ರಾಮೋಜಿ ರಾವ್ ಅವರು ಸಾಮಾಜಿಕ ಮೌಲ್ಯಕ್ಕೆ ಆಧ್ಯತೆ ಕೊಟ್ಟಿದ್ದರು, ಬಳಸುವ ಭಾಷೆ, ವಿಷಯಗಳು ಯಾವ ರೀತಿ ಇರಬೇಕು ಎನ್ನುವ ವಿಚಾರದಲ್ಲಿ ಸ್ಪಷ್ಟತೆ ಇತ್ತು, ಆ ಕಾರಣಕ್ಕೆ ಈಟಿವಿಯಲ್ಲಿ ಬಂದ ಸುದ್ದಿ ಸತ್ಯ ಎನ್ನುವ ಖಚಿತತ ಸಮಾಜದಲ್ಲಿ ಇತ್ತು, ಸಾಮಾಜಿಕ ಬದ್ದತೆ ಕಾರಣಕ್ಕಾಗಿಯೇ ಕೆಲ ಜಾಹೀರಾತುಗಳನ್ನು ತಿರಸ್ಕಾರ ಮಾಡುತ್ತಿದ್ದರು, ನಿಷ್ಟೆ ಮತ್ತು ನಿಷ್ಟಾಂತರನ್ನು ಇಷ್ಟಪಡುತ್ತಿದ್ದರು ಆದರೆ ಈನಾಡು ಹೇಗಿರಬಹುದಿತ್ತೋ ಹಾಗೆ ಇರದಿರುವುದಕ್ಕೆ ಅವರ ಸುತ್ತ ಇದ್ದವರು ಎಷ್ಟು ನಿಷ್ಟರಾಗಿದ್ದರು ಎನ್ನುವುದೇ ಮುಖ್ಯ ಎಂದು ಅವರ ಕನಸುಗಳು ಪೂರ್ಣ ಸಾಕಾರಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಹಿರಿಯ ಸುದ್ದಿವಾಚಕಿ ರಾಧಿಕಾ ರಾಣಿ ಮಾತನಾಡಿ, ನಮ್ಮ ಭಾಗ್ಯದ ಬಾಗಿಲು ತೆರೆದ ದೇವರು ರಾಮೋಜಿರಾವ್ , ನಮಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈಟಿವಿಯಲ್ಲಿನ ಕೆಲ ಎಲ್ಲ ಕೂಡ ಹೊಸದೇ ಆಗಿತ್ತು, ಜೀವನದ ಪಾಠ ನಮಗೆ ಫಿಲ್ಮ್ ಸಿಟಿಯಲ್ಲಿ ಸಿಕ್ಕಿತ್ತು,ಇದಕ್ಕೆಲ್ಲಾ ರಾಮೋಜಿ ರಾವ್ ಸರ್ ಅವರು ನೀಡಿದ ಪ್ರೋತ್ಸಾಹ ಕಾರಣ ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಸಮೀವುಲ್ಲ ಮಾತನಾಡಿ,ಹೊಸತನ, ಪ್ರಯೋಗಶೀಲತೆಗೆ ರಾಮೋಜಿರಾವ್ ಉತ್ತಮ ಉದಾಹರಣೆ, ಸಿನಿಮಾ, ಚಾನೆಲ್ ಎಲ್ಲವೂ ಪ್ರಯೋಗಗಳೇ ಆಗಿದ್ದವು, ಹೊಸತನದಲ್ಲೇ ಇರುತ್ತಿದ್ದವು,ಅವರೊಬ್ಬ ಮಹಾತ್ವಾಕಾಂಕ್ಷೆಯ ಕನಸುಗಾರರಾಗಿದ್ದರು ಎಂದರು.
ಹಿರಿಯ ಪತ್ರಕರ್ತ ರವಿಗೌಡ ಮಾತನಾಡಿ, ಉದ್ಯೋಗಿಗಳ ಕಷ್ಟದಲ್ಲಿ ರಾಮೋಜಿ ರಾವ್ ಅವರ ಸದಾ ನಿಲ್ಲುತ್ತಿದ್ದರು, ನಾನು ಈಟಿವಿ ಭಾರತ್ ಬಿಟ್ಟು ಬೇರೆ ಸಂಸ್ಥೆ ಸೇರುವ ವೇಳೆ ಅವರನ್ನು ಭೇಟಿಯಾಗಿ ಮತ್ತೊಂದು ಅವಕಾಶದ ಬಗ್ಗೆ ಹೇಳಿದಸಗ ಖುಷಿಯಿಂದ ಸಿಹಿ ಕೊಟ್ಟು ಬೆನ್ನು ತಟ್ಟಿ ಸಂಸ್ಥೆಯ ಬಾಗಿಲು ತೆರೆದಿದೆ ಎನ್ನುವ ಅಭಯದೊಂದಿಗೆ ಕಳಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಸೋಮಶೇಖರ್ ಕವಚೂರು ಮಾತನಾಡಿ, ಮಾಧ್ಯಮದಲ್ಲಿ ಮೌಲ್ಯಗಳ ಜೊತೆಗೆ ಕನ್ನಡದ ಬಗ್ಗೆ ಹೆಚ್ಚಿನ ಕಾಳಜಿ ರಾಮೋಜಿ ರಾವ್ ಅವರಿಗೆ ಇತ್ತು, ಇಡೀ ಮಾಧ್ಯಮ ಸಂಸ್ಥೆಯನ್ನು ಗುಣಮಟ್ಟದಲ್ಲಿ ಮೊದಲ ಸ್ತರದಲ್ಲಿ ಇರುವಂತೆ ನೋಡಿಕೊಂಡಿದ್ದರು,ಎಲ್ಲ ಪ್ರಯತ್ನದಲ್ಲಿಯೂ ಅವರ ಯಶಸ್ವಿಯಾಗಿದ್ದರು, ಈಟಿವಿ ಭಾರತ್ ಅವರ ಕನಸು ಇದೂ ಕೂಡ ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ ಅವರು ಮತ್ತಷ್ಟು ಕಾಲ ಇರಬೇಕಿತ್ತು ಎನಿಸುತ್ತಿದೆ ಎನ್ನುತ್ತಾ ರಾಮೋಜಿ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ನ್ಯೂಸ್ ಫಸ್ಟ್ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ರಾಮೋಜಿ ರಾವ್ ಅವರಿಂದ ವೃತ್ತಿಪರ ಬದ್ಧತೆ ಕಲಿತಿದ್ದೇವೆ. ನ್ಯೂಸ್ ಚಾನೆಲ್ ನಡೆಸುವಾಗ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದನ್ನು ರಾಮೋಜಿರಾವ್ ಅವರಿಂದ ಕಲಿಯಬೇಕು ಅಂತ ಹೇಳಿದರು..
ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆನಂದ ಬೈದನಮನೆ, ಹಿರಿಯ ಪತ್ರಕರ್ತರಾದ ಬಿ ವಿ ಶಿವಶಂಕರ್, ನಾಗರಾಜ್ ಎಸ್ ಕೆ, ಸದಾಶಿವ ಶೆಣೈ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಈಟಿವಿ ಸಂಸ್ಥೆಯ ಮಾಜಿ ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಭಾಗವಹಿಸಿದ್ದರು….