ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿನ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಬಕ್ರೀದ್ ಹಬ್ಬದ ಶುಭ ಕೋರಿದರು. ಈ ವೇಳೆ ಸಚಿವ ಜಮೀರ್ ಅಹಮದ್ ಉಪಸ್ಥಿತರಿದ್ದರು. ಇದೇ ವೇಳೆ, ಮುಸ್ಲಿಂ ಮುಖಂಡರು ಮುಸಲ್ಮಾನರ ಅಮಾಮ್ ಶಾಲು, ಟೋಪಿ, ಹಾಕಿ ಸಿಎಂಗೆ ಸನ್ಮಾನಿಸಿದರು.
ಬಳಿಕ ಮುಸಲ್ಮಾನ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ”ಇವತ್ತು ಇಡೀ ಭಾರತದಲ್ಲಿ ಬಕ್ರೀದ್ ಹಬ್ಬದ ಆಚರಣೆ ಮಾಡಲಾಗುತ್ತಿದೆ. ನೀವೆಲ್ಲರೂ ಮನುಕುಲಕ್ಕೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ ಮಾಡಿದ್ದೀರಿ. ಈ ಸಮಯದಲ್ಲಿ ನಾನು ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರುತ್ತೇನೆ. ಈದ್ ಉಲ್ ಅದಾ ತಿಳಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೀರಿ. ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು” ಎಂದು ಕರೆ ನೀಡಿದರು.
ನಾವು ಯಾವುದೇ ತಾರತಮ್ಯ ಮಾಡಲ್ಲ: ”ಇದು ಬಹುತ್ವದ ದೇಶ. ಎಲ್ಲಾ ಭಾಷೆ, ಧರ್ಮಕ್ಕೆ ಸಮಾನತೆ ಕೊಡುವ ದೇಶ. ಮನುಷ್ಯತ್ವ ಬಹಳ ದೊಡ್ಡ. ಎಲ್ಲರಲ್ಲೂ ಸಹಿಷ್ಣುತೆ ಬರಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಬೇಕು. ಆಗ ರಾಷ್ಟ್ರ, ಸಮಾಜ ಏಳಿಗೆ ಆಗುತ್ತೆ. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು. ನಾವು ಯಾವುದೇ ತಾರತಮ್ಯ ಮಾಡಲ್ಲ. ರಾಜ್ಯದ 7 ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಈ ಕೆಲಸವನ್ನು ನಾವು ತಾರತಮ್ಯ ಇಲ್ಲದೇ ಮಾಡುತ್ತೇವೆ. ಅಲ್ಪಸಂಖ್ಯಾತರನ್ನು ಸಮಾನರನ್ನಾಗಿ ನೋಡುವ ಮನೋಭಾವ ನಮ್ಮದು. ಈ ವರ್ಷ ಒಳ್ಳೆಯ ಮಳೆ, ಬೆಳೆ ಆಗಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದರು.