ಬಳ್ಳಾರಿ, ಜೂ.15: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ನನ್ನ ನಿವಾಸ ಇರುವ ವಾರ್ಡ್ ಆಗಿದ್ದು, ಈ ವಾರ್ಡಿನಲ್ಲಿ ಏನೇ ಸಮಸ್ಯೆ ಇದ್ದರೂ ಪರಿಹರಿಸುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಶುಕ್ರವಾರ ಬೆಳಿಗ್ಗೆ 21 ನೇ ವಾರ್ಡಿನ ನೆಹರೂ ಕಾಲನಿಯ ಎರಡು ಪಾರ್ಕ್ ಗಳ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
2023-24ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅಂದಾಜು 50 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡು ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವುದು ಎಂದರು.
ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿ ಯಾರೇ ನನ್ನನ್ನು ಸಂಪರ್ಕಿಸಿದರೂ ಪಕ್ಷ ಬೇಧ ಮರೆತು ಜನರ ಕೆಲಸ ಮಾಡುವೆ ಎಂದ ಅವರು, ನಗರದ ಅಭಿವೃದ್ಧಿ ನನ್ನ ಮೊದಲ ಆದ್ಯತೆ ಎಂದು ಹೇಳಿದರು.
ಭೂಮಿ ಪೂಜೆ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಯಾದವ್, ವಾರ್ಡಿನ ಸದಸ್ಯರಾದ ಸುರೇಖಾ ಮಲ್ಲನಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಬಿಕೆಬಿಎನ್ ಮೂರ್ತಿ, ಕಾಂಗ್ರೆಸ್ ಮುಖಂಡ ಎಲ್ ಮಾರೆಣ್ಣ, ವಾಸು, ಹಿರೇಮಠ ಮೊದಲಾದವರು ಹಾಜರಿದ್ದರು.