ಮೈಸೂರು: “ಈ ಬಾರಿಯ ಸಚಿವ ಸಂಪುಟದಲ್ಲಿ 8 ಜನ ಸಂಸದರಿಗೆ ಸಚಿವ ಸ್ಥಾನ ನೀಡಿದರೂ, ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮೈಸೂರಿನ ಟಿ.ಕೆ. ಲೇಔಟ್ನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಎಷ್ಟೇ ಸಚಿವ ಸ್ಥಾನ ನೀಡಿದರೂ, ಅದು ಆರ್ಎಸ್ಎಸ್ನ ಅಡಿಪಾಯ ಇರುವಂತಹ ಪಕ್ಷ. ಆರ್ಎಸ್ಎಸ್ನ ಮುಖವಾಡ ಇರುವಂತಹ ಪಾರ್ಟಿ ಅದು. ಇಂತಹ ಪಕ್ಷವನ್ನು ನಮ್ಮ ದಕ್ಷಿಣ ಭಾರತದ ಜನ ಯಾರೂ ಬೆಂಬಲಿಸುವುದಿಲ್ಲ. ಈ ಬಾರಿ ಉತ್ತರ ಭಾರತದ ಕೆಲವೆಡೆ ಕೂಡ ಅವರಿಗೆ ಹಿನ್ನಡೆಯಾಗಿದೆ. ಸ್ವತಃ ಆರ್ಎಸ್ಎಸ್ನವರೇ, ಅಹಂಕಾರ ಇದ್ದರೆ ಜನರೇ ಪಾಠ ಕಲಿಸುತ್ತಾರೆ ಎಂಬುದಾಗಿ ಬಿಜೆಪಿಗೆ ಹೇಳಿದ್ದಾರೆ. ಯಾವತ್ತೂ ಬಿಜೆಪಿಯವರದ್ದು ಬೆದರಿಸುವ ಸಂಸ್ಕೃತಿ.” ಎಂದಿದ್ದಾರೆ.
“ನೀಟ್ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೆಲವರು ರ‍್ಯಾಂಕ್ ಬಂದಿದ್ದರೂ, ಅವರಿಗೂ ಅನ್ಯಾಯವಾಗಿದೆ. ನೀಟ್ ಮರು ಪರೀಕ್ಷೆ ಮಾಡಬೇಕು. ತನಿಖೆ ಮಾಡಬೇಕು ಎಂದು ಹೇಳಿದ್ದೇನೆ. ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು, ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡುವುದು ಸರಿಯಲ್ಲ. ಆದ್ದರಿಂದ ನೀಟ್ ಮರು ಪರೀಕ್ಷೆಯಾಗಬೇಕು. ಸಮಗ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನನ್ನ ಮೇಲೆ, ರಾಹುಲ್ ಗಾಂಧಿ ಮೇಲೆ, ಡಿ.ಕೆ.ಶಿವಕುಮಾರ್ ಮೇಲೆ ಕೇಸ್ ಹಾಕಿಲ್ವಾ? ಅರವಿಂದ್ ಕ್ರೇಜಿವಾಲ್ ಅವರನ್ನು ಜೈಲಿಗೆ ಕಳಿಸಿಲ್ವಾ? ಇದು ದ್ವೇಷದ ಹಾಗೂ ಟಾರ್ಗೆಟ್ ರಾಜಕಾರಣ ಅಲ್ವಾ? ನಾನು ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ಟಾರ್ಗೆಟ್ ಹಾಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ” ಎಂದರು.
“ಇಂಜಿನಿಯರಿಂಗ್ ಕಾಲೇಜ್ ಶುಲ್ಕ ಹೆಚ್ಚಳದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಸ್ಥಳೀಯ ಮಟ್ಟದ ಚುನಾವಣೆಯ ದಿನಾಂಕದ ವಿಚಾರ ಇನ್ನೂ ಗೊತ್ತಿಲ್ಲ. ಆದರೆ ಶೀಘ್ರವೇ ಚುನಾವಣೆ ನಡೆಸುತ್ತೇವೆ” ಎಂದು ಮುಖ್ಯಮಂತ್ರಿ ತಿಳಿಸಿದರು.