ಕೊಚ್ಚಿ, ಜೂನ್ 12: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಯಾತ್ರೆಗೆ ಅನುಮತಿ ಕೋರಿ ಬೆಂಗಳೂರು ಉತ್ತರದ 10 ವರ್ಷದ ಬಾಲಕಿ ಸ್ನಿಗ್ಧಾ ಶ್ರೀನಾಥ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯವು ಸುಪ್ರೀಂ ಕೋರ್ಟ್ನ ವಿಸ್ತೃತ ಪೀಠದ ಪರಿಗಣನೆಯಲ್ಲಿದೆ ಎಂದು ತಿಳಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸಿತು.
10 ವರ್ಷ ವಯಸ್ಸಾಗಿದ್ದರೂ ಸಹ ಋತುಚಕ್ರ ಆರಂಭವಾಗಿಲ್ಲದೇ ಇರುವ ಕಾರಣ ವಯೋಮಿತಿಯನ್ನು ಲೆಕ್ಕಿಸದೆ ದೇಗುಲ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಬಾಲಕಿ ಪರ ಕೇರಳ ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು.
10 ವರ್ಷ ವಯಸ್ಸು ಪೂರ್ಣವಾಗುವುದಕ್ಕಿಂತ ಮುಂಚೆಯೇ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಶಬರಿಮಲೆಗೆ ಹೋಗಲು ಬಯಸಿದ್ದೆ. ಆದರೆ, ಆ ಸಂದರ್ಭದಲ್ಲಿ ತಂದೆಯ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ತೊಂದರೆಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈ ಬಾರಿ ಶಬರಿಮಲೆಗೆ ತೆರಳಲು ಅವಕಾಶ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಸೂಚಿಸಬೇಕು ಎಂದು ಬಾಲಕಿ ಮನವಿಯಲ್ಲಿ ಉಲ್ಲೇಖಿಸಿದ್ದಳು. ತಿರುವಾಂಕೂರು ದೇವಸ್ವಂ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಬಾಲಕಿ ನ್ಯಾಯಾಲಯದ ಮೊರೆ ಹೋಗಿದ್ದಳು.