ಟ್ಯಾಂಕರ್ ಮಾಫಿಯಾ ಮತ್ತು ನೀರು ಪೋಲು: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

Ravi Talawar
ಟ್ಯಾಂಕರ್ ಮಾಫಿಯಾ ಮತ್ತು ನೀರು ಪೋಲು: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ
WhatsApp Group Join Now
Telegram Group Join Now

ನವದೆಹಲಿ: ನಗರದಲ್ಲಿ ಟ್ಯಾಂಕರ್ ಮಾಫಿಯಾ ಮತ್ತು ನೀರು ಪೋಲು ಮಾಡುತ್ತಿರುವ ಬಗ್ಗೆ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಅವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಳಿದೆ.

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಪ್ರಸನ್ನ ಬಿ ವರಾಳೆ ಅವರ ರಜಾಕಾಲದ ಪೀಠವು, ಟ್ಯಾಂಕರ್ ಮಾಫಿಯಾವನ್ನು ನಿಭಾಯಿಸಲು ದೆಹಲಿ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಈ ವಿಷಯದಲ್ಲಿ ಕ್ರಮ ಕೈಗೊಳ್ಳಲು ದೆಹಲಿ ಪೊಲೀಸರಿಗೆ ಸೂಚಿಸುತ್ತೇವೆ ಎಂದಿದೆ.

‘ನ್ಯಾಯಾಲಯದ ಮುಂದೆ ಏಕೆ ಸುಳ್ಳು ಹೇಳಿಕೆಗಳನ್ನು ನೀಡಲಾಯಿತು? ಹಿಮಾಚಲ ಪ್ರದೇಶದಿಂದ ನೀರು ಬರುತ್ತಿದೆ ಹಾಗಾದರೆ ದೆಹಲಿಯಲ್ಲಿ ನೀರು ಎಲ್ಲಿಗೆ ಹೋಗುತ್ತಿದೆ? ಇಷ್ಟೊಂದು ಪೋಲು, ಟ್ಯಾಂಕರ್ ಮಾಫಿಯಾಗಳು ಇತ್ಯಾದಿ ಈ ಬಗ್ಗೆ ನೀವು ಏನು ಕ್ರಮ ಕೈಗೊಂಡಿದ್ದೀರಿ?’ ಎಂದು ಪೀಠ ಪ್ರಶ್ನಿಸಿದೆ.

ಜನರು ತೊಂದರೆ ಅನುಭವಿಸುತ್ತಿದ್ದಾರೆ, ನಾವು ಪ್ರತಿ ಸುದ್ದಿ ವಾಹಿನಿಗಳಲ್ಲಿಯೂ ಈ ದೃಶ್ಯಗಳನ್ನು ನೋಡುತ್ತಿದ್ದೇವೆ. ಪ್ರತಿ ಬಾರಿಯೂ ಬೇಸಿಗೆಯಲ್ಲಿ ನೀರಿನ ಕೊರತೆಯು ಉಲ್ಬಣಿಸುತ್ತಲೇ ಇದ್ದರೆ ನೀರು ವ್ಯರ್ಥವಾಗುವುದನ್ನು ನಿಯಂತ್ರಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ’ ಎಂದು ಪೀಠವು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ.

ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಶದನ್ ಫರಾಸತ್, ನೀರನ್ನು ಪೋಲು ಮಾಡುವವರಿಗೆ ನೀರು ಸರಬರಾಜನ್ನು ಕಡಿತಗೊಳಿಸುವ ಮೂಲಕ ಹೆಚ್ಚುವರಿ ನೀರು ವ್ಯರ್ಥವಾಗುವುದನ್ನು ತಡೆಯಲು ಸರ್ಕಾರವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ನೀರು ಪೋಲಾಗುವುದನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಸಂಬಂಧ ಗುರುವಾರ ಮುಂದಿನ ವಿಚಾರಣೆ ನಡೆಯಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ತಲೆದೋರಿರುವ ನೀರಿನ ಬಿಕ್ಕಟ್ಟನ್ನು ತಗ್ಗಿಸಲು ಹಿಮಾಚಲ ಪ್ರದೇಶ ಒದಗಿಸಿದ ಹೆಚ್ಚುವರಿ ನೀರನ್ನು ದೆಹಲಿಗೆ ಬಿಡುಗಡೆ ಮಾಡಲು ಹರಿಯಾಣಕ್ಕೆ ನಿರ್ದೇಶನ ನೀಡುವಂತೆ ದೆಹಲಿ ಸರ್ಕಾರ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

WhatsApp Group Join Now
Telegram Group Join Now
Share This Article