ಮಂಗಳೂರು(ದಕ್ಷಿಣ ಕನ್ನಡ): ನಗರದ ಹೊರವಲಯದ ಬೋಳಿಯಾರು ಎಂಬಲ್ಲಿ ಬಿಜೆಪಿ ವಿಜಯೋತ್ಸವದ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸ್ಥಳವೊಂದರ ಮುಂದೆ ಘೋಷಣೆ ಕೂಗಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.
ಈ ಘಟನೆಗೂ ಮೊದಲು ಧಾರ್ಮಿಕ ಸ್ಥಳದ ಮುಂಭಾಗ ನಡೆದ ಗಲಾಟೆಯ ದೃಶ್ಯ ಇದೀಗ ದೊರೆತಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆಯುತ್ತಿತ್ತು. ಅದರಂತೆ ಧಾರ್ಮಿಕ ಸ್ಥಳವೊಂದರ ಮುಂದೆ ವಿಜಯೋತ್ಸವ ಮೆರವಣಿಗೆ ಸಾಗುತ್ತಿತ್ತು. ವಿಜಯೋತ್ಸವದ ಬಳಿಕ ಧಾರ್ಮಿಕ ಸ್ಥಳದ ಸಮೀಪ ಬೈಕ್ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ. ಇದರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ವೇಳೆ ಧಾರ್ಮಿಕ ಸ್ಥಳದ ಮುಂಭಾಗದಲ್ಲಿದ್ದ ಯುವಕರು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಅಲ್ಲಿಯೇ ಸ್ವಲ್ಪ ದೂರವಿರುವ ಬಾರ್ ಮುಂಭಾಗ ದಾಂದಲೆ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಲಾಗಿದೆ. ಬೋಳಿಯಾರುವಿನಲ್ಲಿ ಮೂರು ಕೆಎಸ್ಆರ್ಪಿ ತುಕಡಿ ಬೀಡುಬಿಟ್ಟಿದೆ.