ನವದೆಹಲಿ, ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿಗೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ಇದರಿಂದ 9 ಕೋಟಿಗೂ ಹೆಚ್ಚು ರೈತರಿಗೆ ಅನುಕೂಲವಾಗಲಿದ್ದು, ಸುಮಾರು 2,000 ಕೋಟಿ ರೂ. ಮೌಲ್ಯದ ನಿಧಿಗೆ ಸಹಿ ಹಾಕಿದ್ದಾರೆ. ಈ ಕಡತಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ.
ಆದ್ದರಿಂದ ಅಧಿಕಾರ ವಹಿಸಿಕೊಂಡ ತಕ್ಷಣ ಮೊದಲ ಕಡತ ರೈತ ಕಲ್ಯಾಣಕ್ಕೆ ಸಂಬಂಧಿಸಿದ್ದಾಗಿದೆ ಎಂದರು.ಮುಂದಿನ ದಿನಗಳಲ್ಲಿ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ನಾವು ಬಯಸುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಾಲ್ ದಹಾಲ್ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಲೋಕಸಭಾ ಚುನಾವಣೆ ಮುಗಿದು ಜೂನ್ 4 ರಂದು ಫಲಿತಾಂಶ ಹೊರಬಿದ್ದಿತ್ತು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬಹುಮತ ಪಡೆದು, ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರಕ್ಕೆ ಮರಳುತ್ತಿದ್ದಂತೆ ಮೋದಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತು ಬಿಡುಗಡೆ ಮಾಡಿದ್ದಾರೆ.