ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗೆಲುವಿನ ವಿಜಯೋತ್ಸವದ ಬಳಿಕ ಮಸೀದಿ ಬಳಿ ಘೋಷಣೆ ಕೂಗಿದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿದು ಓರ್ವನಿಗೆ ಥಳಿಸಿರುವ ಘಟನೆಯೊಂದು ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ ರಾತ್ರಿ ನಡೆದಿದೆ.
ಸಂಸದರಾಗಿ ಆಯ್ಕೆಗೊಂಡ ಬ್ರಿಜೇಶ್ ಚೌಟ ಅವರ ವಿಜಯೋತ್ಸವ ಗ್ರಾಮ ಸಮಿತಿ ವತಿಯಿಂದ ಬೋಳಿಯಾರಿನಿಂದ ಧರ್ಮನಗರದವರೆಗೆ ಆಯೋಜಿಸಲಾಗಿತ್ತು. ಈ ಸಂದರ್ಭ ಬೋಳಿಯಾರು ಮಸೀದಿ ಸಮೀಪ ಬೈಕ್ ಸೀಟಿಗೆ ಬಡಿದು ವಿಜಯೋತ್ಸವ ಘೋಷಣೆಗಳನ್ನು ಬಿಜೆಪಿ ಕಾರ್ಯಕರ್ತರು ಕೂಗಿದ್ದಾರೆನ್ನಲಾಗಿದೆ. ನಂತರ ವಿಜಯೋತ್ಸವ ಮುಗಿಸಿ ಬೈಕ್ ನಲ್ಲಿ ಮೂವರು ಮುಡಿಪು ಕಡೆಗೆ ತೆರಳುತ್ತಿದ್ದಾಗ 20-245 ಮುಸ್ಲಿಂ ಯುವಕರ ಗುಂಪು ಕೆಲವು ಬೈಕ್ ಗಳಲ್ಲಿ ಹಿಂಬಾಲಿಸಲು ಆರಂಭಿಸಿದ್ದಾರೆ.
ಈ ವೇಳೆ ಬಿಜೆಪಿ ಕಾರ್ಯಕರ್ತರು ಮಸೀದಿಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಬಾರ್ ಎಂದು ಬೈಕ್ ನಿಲ್ಲಿಸಿದ್ದಾರೆ. ಬಳಿಕ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಮೂವರಿಗೆ ಯುವಕರ ಗುಂಪು ಥಳಿಸಿದೆ. ಬಳಿಕ ಇಬ್ಬರಿಗೆ ಚೂರಿ ಇರಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪೈಕಿ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೋರ್ವ ಯುವಕನಿಗೆ ಕೆಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೂರಿ ಇರಿತಕ್ಕೆ ಒಳಗಾದವರನ್ನು ಮುತ್ತಪ್ಪ ಪೂಜಾರಿ ಎಂಬವರ ಪುತ್ರ ಹರೀಶ್ (41 ವರ್ಷ) ಹಾಗೂ ಕೋಟಿಯಪ್ಪ ಅವರ ಪುತ್ರ ನಂದಕುಮಾರ್ (24 ವರ್ಷ) ಎಂದು ಗುರುತಿಸಲಾಗಿದೆ.
ಕೋಟಿಯಪ್ಪ ಪೂಜಾರಿ ಎಂಬವರ ಪುತ್ರ ಕೃಷ್ಣಕುಮಾರ್ ಥಳಿತಕ್ಕೊಳಗಾದ ಯುವಕನಾಗಿದ್ದಾನೆ. ಮೂವರೂ ಇನ್ನೋಳಿಯ ನಿವಾಸಿಗಳೆಂದು ತಿಳಿದುಬಂದಿದೆ.