ಜೂನ್ 9ಕ್ಕೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ

Ravi Talawar
ಜೂನ್ 9ಕ್ಕೆ ನರೇಂದ್ರ ಮೋದಿ  ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ
WhatsApp Group Join Now
Telegram Group Join Now

ನವದೆಹಲಿ: ಜೂನ್ 9ಕ್ಕೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ದೆಹಲಿಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ದೆಹಲಿಯ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್​ನ​ಲ್ಲಿ ಎನ್​ಡಿಎ ಸಂಸದರು ನಡೆಸಿದರು. ಈ ಸಭೆಯಲ್ಲಿ ಸಂಸದ ಪ್ರಲ್ಹಾದ್​ ಜೋಶಿ ಅಧಿಕೃತವಾಗಿ ಘೋಷಿಸಿದರು.

ಹಲವು ನಾಯಕರು ಸಭೆಯಲ್ಲಿ ಭಾಗಿ: 240 ಬಿಜೆಪಿ ಸಂಸದರೊಂದಿಗೆ, ಟಿಡಿಪಿ, ಜೆಡಿಯು, ಶಿವಸೇನೆ, ಲೋಕಜನಶಕ್ತಿ (ರಾಮವಿಲಾಸ್), ಎನ್‌ಸಿಪಿ, ಜೆಡಿಎಸ್, ಜನಸೇನೆ, ಅಪ್ನಾ ದಳ ಮತ್ತು ಇತರ ಮಿತ್ರಪಕ್ಷಗಳ ಸಂಸದರು, ಎನ್‌ಡಿಎ ಪಕ್ಷಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮೋದಿ ನಾಯಕತ್ವವನ್ನು ಬೆಂಬಲಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕಾರ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಚಾಣಕ್ಯ ಅಮಿತ್ ಶಾ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು, ಬಿಹಾರ್ ಸಿಎಂ ನಿತೀಶ್ ಕುಮಾರ್​ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ನಾವು ಪ್ರಧಾನಿ ಮೋದಿಯವರೊಂದಿಗೆ ಇದ್ದೇವೆ- ಎಚ್‌ಡಿಕೆ: “ಸ್ಥಿರ ಸರ್ಕಾರ ರಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ಗೆ ತಮ್ಮ ಪಕ್ಷದ ಬೆಂಬಲ ನೀಡುತ್ತೇವೆ” ಎಂದು ಜೆಡಿಎಸ್​ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

”ನಾವೆಲ್ಲರೂ ಮೋದಿಯವರ ಜೊತೆಗಿದ್ದೇವೆ, ನಾವು ಕೇವಲ ಎನ್‌ಡಿಎ ಜೊತೆ ಕೈಜೋಡಿಸುತ್ತಿದ್ದೇವೆ. ನಾನು ಮಾತ್ರವಲ್ಲದೆ ಇಡೀ ದೇಶವೇ ಅವರೊಂದಿಗೆ ಇದೆ. ನಮ್ಮ ಯಾವುದೇ ಬೇಡಿಕೆಯಿಲ್ಲ, ದೇಶಕ್ಕೆ ಸ್ಥಿರ ಸರ್ಕಾರ ಬೇಕು, ಅದಕ್ಕಾಗಿ ನಾವು ಅವರೊಂದಿಗೆ ಕೈಜೋಡಿಸುತ್ತಿದ್ದೇವೆ” ಎಂದು ತಿಳಿಸಿದರು.

ಜೂನ್​ 4ರಂದು ಪ್ರಕಟವಾದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ​ಎನ್​ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಜೂನ್​ 9ಕ್ಕೆ ಈ ಪ್ರಮಾಣವಚನ ಸಮಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ.

ನೆರೆ ದೇಶಗಳಿಗೆ ಆಹ್ವಾನ: ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಜೂನ್​ 9ರಂದು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ನೇಪಾಳ ಮತ್ತು ಮಾರಿಷಸ್‌ ದೇಶದ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಚುನಾವಣೆ ಫಲಿತಾಂಶದ ಬಳಿಕ ವಿಜಯದ ಬಳಿಕ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ವೇಳೆ, ಮೋದಿ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ ಎಂದು ವಿಕ್ರಮಸಿಂಘೆ ಕಚೇರಿ ಹೇಳಿದೆ.

ಜೊತೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೂ ಮೋದಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾವಹಿಸುವಂತೆ ಆಹ್ವಾನ ನೀಡಿದ್ದಾರೆ. ಇನ್ನು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಹಾಗೂ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ರಾಜತಾಂತ್ರಿಕ ಮೂಲಗಳು ಸ್ಪಷ್ಟಪಡಿಸಿವೆ.

2014, 2019ರಲ್ಲಿ ಪ್ರಮಾಣ ವಚನ ಸಮಾರಂಭ ಮಾಹಿತಿ: 2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ತಮ್ಮ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ದೇಶಗಳ ನಾಯಕರು ಪಾಲ್ಗೊಂಡಿದ್ದರು. 2019ರಲ್ಲಿ ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಿ ಸ್ವೀಕಾರ ಮಾಡಿದಾಗ ಬಂಗಾಳ ಕೊಲ್ಲಿಯನ್ನು ಅವಲಂಬಿಸಿದ ‘BIMSTEC’ (ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ಲೆಂಡ್​ ) ರಾಷ್ಟ್ರಗಳ ನಾಯಕರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article