ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.
ಮೈಸೂರು ಜಿಲ್ಲೆಯ ಕೆಆರ್ ನಗರ ಪೊಲೀಸರು ಮಹಿಳೆಯ ಅಪಹರಣ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಗೆ ಬೇಕಾಗಿರುವ ಭವಾನಿ ರೇವಣ್ಣ ವಿರುದ್ಧ ಬೆಂಗಳೂರಿನ 42 ನೇ ಎಸಿಎಂಎಂ ಅವರು ಬಂಧನ ವಾರಂಟ್ ಹೊರಡಿಸಿದೆ. ಪ್ರಕರಣದಲ್ಲಿ ಭವಾನಿ ಭಾಗಿಯಾಗಿರುವ ಬಗ್ಗೆ ಎಸ್ಐಟಿ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ಅವರಿಗೆ ತನಿಖಾ ತಂಡ ಮೂರು ಬಾರಿ ನೋಟಿಸ್ ನೀಡಿದ್ದರೂ ಎಸ್ಐಟಿ ಎದುರು ಹಾಜರಾಗಲು ವಿಫಲರಾಗಿದ್ದಾರೆ. ಹದಿನೈದು ದಿನಗಳಿಂದ ತಲೆಮರೆಸಿಕೊಂಡಿರುವ ಭವಾನಿಯನ್ನು ಬಂಧಿಸಲು ಎಸ್ಐಟಿ ಪೊಲೀಸ್ ತಂಡಗಳನ್ನು ರಚಿಸಿದೆ. ಬೆಂಗಳೂರಿಗೆ ಹಿಂದಿರುಗುವ ಮೊದಲು ಎಸ್ಐಟಿ ಇತ್ತೀಚೆಗೆ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿಗಾಗಿ ಕನಿಷ್ಠ ಏಳು ಗಂಟೆಗಳ ಕಾಲ ಕಾದು ವಾಪಾಸಾಗಿತ್ತು.