ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಹೊಸದಾಗಿ ಚುನಾಯಿತ ಸಂಸದರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಲು ಇಂದು (ಶುಕ್ರವಾರ) ಸಭೆ ಸೇರಲಿದ್ದು, ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಾರಿ ಮಾಡಿಕೊಡಲಿದ್ದಾರೆ.
ಎನ್ಡಿಎ ಸಂಸದರ ನಾಯಕರಾಗಿ ಮೋದಿ ಆಯ್ಕೆಯಾದ ನಂತರ, ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಾವೆಲ್ಲ ಸಂಸದರು ಬೆಂಬಲ ನೀಡುತ್ತಾರೆಂಬ ಪಟ್ಟಿಯನ್ನು ಅವರಿಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿ ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಪಿಎಂ ಮೋದಿ ಬುಧವಾರ ಆಡಳಿತಾರೂಢ ಮೈತ್ರಿಕೂಟದ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ಮೋದಿಯನ್ನು ಅದರ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಎನ್ಡಿಎ ಸರ್ಕಾರವು ತನ್ನ ಪರಂಪರೆಯನ್ನು ಉಳಿಸಿಕೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಜನರ ಜೀವನಮಟ್ಟವನ್ನು ಎತ್ತುವ ಕೆಲಸವನ್ನು ಮುಂದುವರಿಸುತ್ತದೆ ಎಂದು ಹೇಳಿದರು.