ಇಂದು ಸಂಸದ ಪ್ರಜ್ವಲ್​​ ರೇವಣ್ಣಗೆ ಎಸ್​ಐಟಿ ಕಸ್ಟಡಿ ಅಂತ್ಯ

Ravi Talawar
ಇಂದು ಸಂಸದ ಪ್ರಜ್ವಲ್​​ ರೇವಣ್ಣಗೆ ಎಸ್​ಐಟಿ ಕಸ್ಟಡಿ ಅಂತ್ಯ
WhatsApp Group Join Now
Telegram Group Join Now

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣಗೆ ನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿದೆ.

ನ್ಯಾಯಾಲಯದ ಅನುಮತಿ ಪಡೆದ ಎಸ್‌ಐಟಿ ಅಧಿಕಾರಿಗಳು ಬುಧವಾರ ಬೆಳಗ್ಗೆ 11 ಗಂಟೆಗೆ ಬೌರಿಂಗ್​ ಆಸ್ಪತ್ರೆಗೆ ಕರೆದೊಯ್ದಿದ್ದರು. ಬೌರಿಂಗ್ ಆಸ್ಪತ್ರೆ ಆವರಣದಲ್ಲಿರುವ ಅಟಲ್ ಬಿಹಾರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಜ್ವಲ್​ಗೆ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ನಡೆದಿದೆ. ವೀರ್ಯ ಮತ್ತು ರಕ್ತ ಮಾದರಿ ಸಂಗ್ರಹ ಮತ್ತು ಲೈಂಗಿಕ ಕ್ರಿಯೆ ನಡೆಸಲು ಸಾಮರ್ಥ್ಯ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಈ ಪರೀಕ್ಷೆಯನ್ನು ನಡೆಸಲಾಗಿದೆ. ತಪಾಸಣೆ ಮುಗಿದ ಬಳಿಕ ಸಂಜೆ ಮತ್ತೆ ಸಿಐಡಿ ಕಚೇರಿಗೆ ಕರೆ ತಂದು ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ. ಇನ್ನೊಂದು ವಾರದಲ್ಲಿ ವರದಿ ಎಸ್‌ಐಟಿ ಕೈ ಸೇರಲಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೂ ಮುನ್ನ ಎರಡು ದಿನಗಳ ಹಿಂದೆ ಪುರುಷತ್ವ ಪರೀಕ್ಷೆ ಸಲುವಾಗಿ ಬೌರಿಂಗ್ ಆಸ್ಪತ್ರೆಗೆ ಪ್ರಜ್ವಲ್​ ರೇವಣ್ಣನನ್ನು ಎಸ್‌ಐಟಿ ಕರೆದುಕೊಂಡು ಹೋಗಿತ್ತು. ಆಗ ಕೆಲ ವೈದ್ಯಕೀಯ ಪರೀಕ್ಷೆಗಳಿಗೆ ಕಾನೂನು ತೊಡಕಿನ ಬಗ್ಗೆ ವೈದ್ಯರು ತಿಳಿಸಿದ್ದರು. ಇದರಿಂದ ನ್ಯಾಯಾಲಯದ ಅನುಮತಿ ಪಡೆದು ಎಸ್‌ಐಟಿ ನಿನ್ನೆ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದಿತ್ತು. ನ್ಯಾಯಾಲಯದ ಸಮ್ಮತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ತಜ್ಞ ವೈದ್ಯರ ತಂಡವನ್ನು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರು ರಚಿಸಿದ್ದರು.

 ಪ್ರಜ್ವಲ್ ರೇವಣ್ಣ ವಿದೇಶದಿಂದ ಆಗಮಿಸುತ್ತಿದ್ದಂತೆ ಮೇ31 ರಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್​ಐಟಿ ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟ್​ಗೆ ಹಾಜರುಪಡಿಸಿ, ಜೂನ್ 6ರವರೆಗೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಇಂದು ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಎಸ್​ಐಟಿ ಅಧಿಕಾರಿಗಳು ಕೋರ್ಟ್​ ಮುಂದೆ ಮತ್ತೆ ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಲಿದ್ದಾರೆ. ಹೆಚ್ಚಿನ ತನಿಖೆಗಾಗಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ಎಸ್​ಐಟಿ ಅಧಿಕಾರಿಗಳು ಕೋರ್ಟ್​ಗೆ ಮನವಿ ಮಾಡುವ ಸಾಧ್ಯತೆ ಇದೆ.

ಹೊಳೆನರಸೀಪುರ ಪೊಲೀಸ್ ಠಾಣೆ ಮತ್ತು ಸಿಐಡಿ ಠಾಣೆಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಸ್​ಐಟಿ ರಚಿಸಿ, ತನಿಖೆಗೆ ಆದೇಶಿಸಿತ್ತು. ಇನ್ನು ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದ ಬಳಿಕ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದರು. ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನಟರ್ ನೋಟಿಸ್, ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು. ಕೊನೆಗೆ 35 ದಿನಗಳ ಬಳಿಕ ಪ್ರಜ್ವಲ್ ಬೆಂಗಳೂರಿಗೆ ಆಗಮಿಸಿದ್ದರು.

WhatsApp Group Join Now
Telegram Group Join Now
Share This Article