ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ. ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು ಸೇರಿದಂತೆ ಮಿತ್ರಪಕ್ಷಗಳು ತಮ್ಮ ಬೆಂಬಲದ ಪತ್ರ ನೀಡಿವೆ. ಹೊಸ ಸರ್ಕಾರ ರಚನೆಗೆ ಜೂನ್ 7ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಹಕ್ಕು ಮಂಡಿಸುವ ಸಾಧ್ಯತೆ ಇದೆ.
ಮೋದಿ ನಿವಾಸದಲ್ಲಿಂದು ಸಂಜೆ ಮೈತ್ರಿಕೂಟದ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಏಕನಾಥ್ ಶಿಂಧೆ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಜೊತೆಗೆ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್, ಎನ್ಸಿಪಿ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್ ಸೇರಿ ಇತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಎನ್ಡಿಎ ಮೈತ್ರಿಕೂಟದ ನಿರ್ಣಯವನ್ನೂ ಅಂಗೀಕರಿಸಲಾಗಿದೆ.