ಹುಬ್ಬಳ್ಳಿ, ಜೂನ್ 03: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾನುವಾರ ರಾತ್ರಿ ಬುಕ್ ಸ್ಟಾಲ್‌ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ದಾಸ್ತಾನು ಬೆಂಕಿಗೆ ಸುಟ್ಟಿದೆ, ಮಾಲೀಕರಿಗೆ ನಷ್ಟವಾಗಿದೆ.
ಮೂಲಗಳ ಪ್ರಕಾರ, ಭಾನುವಾರ ರಾತ್ರಿ ಬುಕ್ ಸ್ಟಾಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಡೀ ಬುಕ್ ಸ್ಟಾಲ್ ಸುಟ್ಟು ಭಸ್ಮವಾಗಿದೆ. ಈ ಘಟನೆ ಹುಬ್ಬಳ್ಳಿಯ ಕಮರಿಪೇಟೆ ಹತ್ತಿರ ರಾಮದೇವ್ ಬಿಲ್ಡಿಂಗ್ ನಲ್ಲಿ ಘಟನೆ ನಡೆದಿದೆ. ಸುಮಾರು 20 ಲಕ್ಷಕ್ಕೂ ಅಧಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಿಯ ನಿವಾಸಿಗಳಾದ ವಿನೋದ ಕಬಾಡಿ ಎಂಬುವರು ಸುಟ್ಟಿರುವ ಈ ‘ಬ್ರಾವೇಟಿ ಬುಕ್ ಸ್ಟಾಲ್ ಅಂಗಡಿ’ ಮಾಲೀಕರು. ಶಾರ್ಟ್ ಸರ್ಕ್ಯೂಟ್ ಇಲ್ಲವೇ ಹೆಚ್ಚಿಟ್ಟ ದೀಪದಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕ್ಕೊಂಡು ಇಡೀ ಬುಕ್ ಸ್ಟಾಲ್ ಗೆ ಆವರಿಸಿದೆ ಎಂದು ಶಂಕೆ ವ್ಯಕ್ತಾಗಿದೆ.
ಬೆಂಕಿಯ ಜ್ವಾಲೆ ದಟ್ಟ ಹೊಗೆ ವ್ಯಾಪ್ತಿಸುತ್ತಿದ್ದಂತೆ ಕೂಡಲೇ ಸ್ಥಳೀಯ ನಿವಾಸಿಗಳು ಗಮನಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಇಡೀ ಅಂಗಡಿಗೆ ಬೆಂಕಿ ಹೊತ್ತಿದ ಪರಿಣಾಮ, ಬೆಂಕಿಯನ್ನು ನಂದಿಸುವುದಕ್ಕೆ ಹರ ಸಾಹಸ ಪಟ್ಟರು. ಸದ್ಯ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಸಹ ಕಟ್ಟಡದ ಅವಶೇಷಗಳ ತೆರವು ಮಾಡಲಾಗುತ್ತಿದೆ.