ಬೆಂಗಳೂರು, ಜೂನ್ 03: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ ಜಾರಿಗೆ ಬ್ರೇಕ್ ಬಿದ್ದಿತ್ತು. ಸದ್ಯ ಜೂನ್ 3 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಏರಿಕೆ ಆಗಿದೆ.
ಇಂದಿನಿಂದ (ಜೂನ್ 3) ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಹಾಗೂ ತುಮಕೂರಿನಿಂದ ಹೊನ್ನಾವರಕ್ಕೆ ಸಾಗುವ ಹೆದ್ದಾರಿಗಳು ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಆಗಿರುವ ಹೊಸಕೋಟೆ-ದೇವನಹಳ್ಳಿ ಹೆದ್ದಾರಿ ಬಳಸುವ ವಾಹನ ಸವಾರರು ಹಾಲಿ ಶುಲ್ಕಕ್ಕಿಂತ ಶೇಕಡಾ 3ರಿಂದ ಶೇ25ರಷ್ಟು ಹೆಚ್ಚಿನ ಶುಲ್ಕ ಪಾವತಿಸಲಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ ಎಂದು ‘ಡಿಎಚ್’ವರದಿ ಮಾಡಿದೆ.
ಹೈವೇ ಟೋಲ್ ಶುಲ್ಕ ಏರಿಕೆಯು ‘ಸಗಟು ಬೆಲೆ ಸೂಚ್ಯಂಕ’ (WPI) ಆಧಾರದಲ್ಲಿ ಹೆಚ್ಚಿಸಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಮಾಡಲಾಗಿತ್ತು. ಈ ನಡುವೆ ಲೋಕಸಭಾ ಚುನಾವಣೆ, ನೀತಿ ಸಂಹಿತ ಕಾರಣದಿಂದ ಜಾರಿಗೆ ತಡೆ ನೀಡಲಾಯಿತು. ಇದೀಗ ಹೊಸ ಶುಲ್ಕ ನಿಯಮ ಮುಂದಿನ ವರ್ಷ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಬೆಂಗಳೂರಲ್ಲಿನ NHAI ಪ್ರಾದೇಶಿಕ ಅಧಿಕಾರಿಗಳಾದ ವಿಲಾಸ್ ಪಿ ಬ್ರಹ್ಮಂಕರ್ ಅವರು, ಟೋಲ್ ಪರಿಷ್ಕರಣೆ ಕಳೆದ ಏಪ್ರಿಲ್ 1ರಿಂದ ಜಾರಿಗೆ ಬರಬೇಕಿತ್ತು, ಆದರೆ ಅದನ್ನು ತಡೆಹಿಡಿಯಲಾಗಿತ್ತು. ಸದ್ಯ ಜೂನ್ 3ರಿಂದ ಜಾರಿ ಬರುತ್ತಿದೆ. ಉದ್ಯಾನ ನಗರ ಬೆಂಗಳೂರು ಮತ್ತು ಅರಮನೆ ನಗರಿ ಮೈಸೂರು ಮದ್ಯದ ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕವನ್ನು ಶೇಕಡಾ 3% ಹೆಚ್ಚಿಸಲಾಗಿದೆ.