ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜಾಹೀರಾತು ಪ್ರಕಟಿಸಿ ಮಾನಹಾನಿ ಮಾಡಿದ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಪ್ರಕರಣದಲ್ಲಿ ಸಂಸದ ರಾಹುಲ್ ಗಾಂಧಿ ಖುದ್ದು ಹಾಜರಾತಿಗೆ ವಿನಾಯ್ತಿ ಕೋರಿರುವ ಅರ್ಜಿ ವಿಚಾರಣೆ ನಡೆದು, ಮಧ್ಯಾಹ್ನ ತೀರ್ಪು ಹೊರಬೀಳಲಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಖುದ್ದು ಹಾಜರಾಗಿ, ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಬಳಿಕ ಅವರ ಪರ ವಕೀಲರು ಅರ್ಜಿ ಸಲ್ಲಿಸಿ, ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋಟ್ರ್ಗೆ ಮನವಿ ಮಾಡಿದರು.
ಈ ಅಂಶ ಪರಿಗಣಿಸಿದ ನ್ಯಾಯಾಲಯ, ಅರ್ಜಿಯ ಸಂಬಂಧ ಮಧ್ಯಾಹ್ನ 3 ಗಂಟೆಗೆ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿ, ತಾವು ಇನ್ನು ಹೊರಡಬಹುದು ಎಂದು ಸೂಚಿಸಿದರು. ತಕ್ಷಣ ಇಬ್ಬರೂ ನಾಯಕರು ನ್ಯಾಯಾಲಯದಿಂದ ಹೊರನಡೆದರು. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸೂರ್ಯ ಮುಕುಂದರಾಜು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಸ್.ಎ.ಅಹ್ಮದ್ ಮತ್ತು ಸಿ.ಆರ್.ದೀಪು ಮತ್ತು ರಾಹುಲ್ ಗಾಂಧಿ ಅವರಿಗೆ ನಿಶಿತ್ ಶೆಟ್ಟಿ ಮತ್ತು ಕೆಪಿಸಿಸಿ ಪರವಾಗಿ ಸಂಜಯ್ ಯಾದವ್ ಅವರು ವಕಾಲತ್ತು ವಹಿಸಿದ್ದರು.